Aditi Rao Hydari-Siddharth: ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷಗಳಷ್ಟು ಹಳೆಯದಾದ ಶ್ರೀರಂಗಪುರ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಮದುವೆಯಲ್ಲಿ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಇದೀಗ ಇಬ್ಬರೂ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಅದಿತಿ ಮದುವೆಯಲ್ಲಿ ಬಹಳ ಸರಳವಾಗಿ ಹೆಚ್ಚು ಮೇಕಪ್ ಇಲ್ಲದೆ ಕಾಣಿಸಿಕೊಂಡಿರುವುದು ಅಭಿಮಾನಿಗಳು ಮತ್ತು ಫ್ಯಾಶನ್ ಪ್ರಿಯರನ್ನು ಆಕರ್ಷಿಸಿದೆ. ಈ ವಿಶೇಷ ದಿನದಂದು ಅದಿತಿ ಮಹೇಶ್ವರಿ ಟಿಶ್ಯೂ ಲೆಹೆಂಗಾವನ್ನು ಧರಿಸಿದ್ದು ವಿಶೇಷ.
ಮಧ್ಯಪ್ರದೇಶದ ಹೆಮ್ಮೆ
ಅದಿತಿಯ ಮಹೇಶ್ವರಿ ಉಡುಗೆಯ ಆಯ್ಕೆಯು ಭಾರತೀಯ ಜವಳಿ ಪರಂಪರೆಯೊಂದಿಗೆ ಆಳವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಮಧ್ಯಪ್ರದೇಶದ ಮಹೇಶ್ವರ್ ನಗರದಿಂದ ಹುಟ್ಟಿಕೊಂಡ ಈ ಉಡುಪು ಶ್ರೀಮಂತ ಇತಿಹಾಸ ಮತ್ತು ಕೈಯಿಂದ ನೇಯ್ದ ಟೆಕ್ನಿಕ್‌ಗಳಿಗೆ ಹೆಸರುವಾಸಿಯಾಗಿದೆ. ಉಡುಪಿನಲ್ಲಿ ಮ್ಯೂಟ್ ಮಾಡಿದ ಚಿನ್ನದ ವರ್ಣಗಳು ಸಂಕೀರ್ಣವಾದ ಝರಿ ಡಿಟೇಲಿಂಗ್ ಒಳಗೊಂಡಿದೆ. ಇದು ಮಧ್ಯಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಕಲೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ. ವಿನ್ಯಾಸವು ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಉತ್ತಮ ಸಮತೋಲನವನ್ನು ಹೊಂದಿದೆ. ಇದು ಸರಳತೆಗೆ ಆದ್ಯತೆ ನೀಡುವ ವಧುಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.
ಆಕರ್ಷಕ ಆಭರಣಗಳು
ಸೀರೆ ಮಾತ್ರವಲ್ಲ, ಅದಿತಿ ಮೇಕಪ್ ಕೂಡ ಸಿಂಪಲ್. ಆಭರಣದ ವಿಷಯಕ್ಕೆ ಬಂದರೆ, ಅದಿತಿ ಕತ್ತರಿಸದ ವಜ್ರಗಳು ಮತ್ತು ಮುತ್ತುಗಳಿಂದ ರಚಿಸಲಾದ ಆಕರ್ಷಕವಾದ, ಸರಳವಾದ ಚೋಕರ್ ನೆಕ್ಲೇಸ್ ಧರಿಸಿದ್ದರು. ಆಭರಣಗಳು ಸಂಪ್ರದಾಯ ಮತ್ತು ಆಧುನಿಕ ಎರಡರ ಪರಿಪೂರ್ಣ ಮಿಶ್ರಣವಾಗಿದ್ದು, ಗ್ಲಾಮರ್ ಟಚ್ ನೀಡಿತ್ತು. ಕತ್ತರಿಸದ ವಜ್ರಗಳಿಂದ ವಿನ್ಯಾಸಗೊಳಿಸಲಾದ ಮ್ಯಾಚಿಂಗ್ ಕಿವಿಯೋಲೆಗಳೊಂದಿಗೆ ಚೋಕರ್ ಪರ್‌ಫೆಕ್ಟ್ ಕಾಂಬಿನೇಶನ್ ಆಗಿತ್ತು. ಆದರೆ ಇದೆಲ್ಲದರ ಮಧ್ಯೆ ಮಾಂಗ್ ಟಿಕ್ಕಾ ರಾಯಲ್ ಟಚ್ ನೀಡಿದ್ದಂತೂ ಸುಳ್ಳಲ್ಲ. ಆಕೆಯ ಆಭರಣಗಳ ಆಯ್ಕೆಯು ಆಧುನಿಕ ವಧುವಿಗೆ ಹಗುರವಾದ ಆಭರಣಗಳತ್ತ ಇರುವ ಒಲವು ತೋರಿಸುತ್ತದೆ.
ಆಧುನಿಕ ಕಾಲದ ಸರಳ ವಧು
ಅದಿತಿ ರಾವ್ ಹೈದರಿಯ ಮದುವೆಯ ಲುಕ್ ನೋಡಿದರೆ ಭಾರತೀಯ ವಿವಾಹಗಳಲ್ಲಿ ಹೆಚ್ಚಾಗಿ ಕಂಡುಬರುವ ವಧುವಿನ ನೋಟದ ತರಹವಿರದೆ ಬಹಳ ಸರಳವಾಗಿದೆ. ಆಕೆಯ ಉಡುಪು ಮತ್ತು ಆಭರಣ ಎರಡರಲ್ಲೂ ಸಿಂಪಲ್ ಆಗಿ ಇರಬೇಕೆಂಬ ನಿರ್ಧಾರವು ತಾವು ಸರಳವಾಗಿ ಮತ್ತು ಸೊಗಸಾಗಿ ಕಾಣಬೇಕೆಂದು ಬಯಸುವ ವಧುಗಳಿಗೆ ಹೊಸ ಟ್ರೆಂಡ್ ಹುಟ್ಟುಹಾಕುತ್ತದೆ. ಮಹೇಶ್ವರಿ ಟಿಶ್ಯೂ ಲೆಹೆಂಗಾದೊಂದಿಗೆ ಕಡಿಮೆ ಆಭರಣಗಳು ಮತ್ತು ಮೇಕಪ್ ಜೊತೆಗೂಡಿ ಸೌಂದರ್ಯ ಇರುವುದು ಹೆಚ್ಚುಗಾರಿಕೆಯಲ್ಲಿ ಅಲ್ಲ ಎಂಬುದನ್ನು ತೋರಿಸಿದೆ. ಕೆಲವೊಮ್ಮೆ ಸರಳತೆಯ ಸೌಂದರ್ಯವು ಕಣ್ಮನ ಸೆಳೆಯುತ್ತದೆ.
ಇಬ್ಬರಿಗೂ ಇದು ಎರಡನೇ ಮದುವೆ
ಸಿದ್ಧಾರ್ಥ್ ಮತ್ತು ಅದಿತಿ 2021 ರ ತಮಿಳು-ತೆಲುಗು ಚಿತ್ರ ಮಹಾಸಮುದ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಅಂದಿನಿಂದ ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆ . 2003ರಲ್ಲಿ ಮೇಘನಾ ಎಂಬ ಹುಡುಗಿಯೊಂದಿಗೆ ಸಿದ್ಧಾರ್ಥ್ ಮೊದಲ ವಿವಾಹವಾಗಿತ್ತು. ಈ ಮದುವೆಯು 2007 ರಲ್ಲಿ ಮುರಿದುಬಿತ್ತು. ಅದಿತಿಯ ಮೊದಲ ಮದುವೆಯು ನಟ ಸತ್ಯದೀಪ್ ಮಿಶ್ರಾ ಅವರೊಂದಿಗೆ ಆಗಿತ್ತು. ಆಗ ಅವರಿಗೆ 21 ವರ್ಷ. ನಾಲ್ಕು ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು.