Viral Video: ಇಂದಿನ ಕಾಲದಲ್ಲಿ ಜನಕ್ಕೆ ರೀಲ್ಸ್ ಚಟ ಎಷ್ಟಿದೆ ಎಂಬುದರ ಬಗ್ಗೆ ನಾವು ಹೆಚ್ಚೇನು ಹೇಳಬೇಕಿಲ್ಲ. ಕೆಲವರಿಗೆ ರೀಲ್ಸ್ ಮಾಡುವುದಕ್ಕೆ 24 ಗಂಟೆಯೂ ಸಾಕಾಗದಿದ್ದರೆ, ಮತ್ತೆ ಕೆಲವರು ದಿನವಿಡೀ ರೀಲ್ಸ್ ನೋಡುವುದರಲ್ಲೇ ಬ್ಯುಸಿ. ಇಂತಹ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದರಲ್ಲಿ ರೀಲ್ಸ್ಗೋಸ್ಕರ ಜನರು ತಮ್ಮ ಪ್ರಾಣವನ್ನು ಪಣಕ್ಕಿಡುವ ಕೆಲವು ವಿಡಿಯೋಗಳನ್ನು ಸಹ ನೋಡಿದ್ದೇವೆ. ಆದರೆ ಇತ್ತೀಚೆಗಷ್ಟೇ ಹುಡುಗನೊಬ್ಬ ರೀಲ್ಸ್ ಮಾಡುವುದು ಮತ್ತೊಬ್ಬರಿಗೆ ಒಳ್ಳೆಯದಾಗಿದೆ. ಹೌದು, ಆತ ಓರ್ವ ವ್ಯಕ್ತಿಯ ಜೀವ ಉಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಹೇಗೆ ಸಂಭವಿಸಿತು ಎಂಬುದರ ವಿವರ ಇಲ್ಲಿದೆ ನೋಡಿ….
ವೈರಲ್ ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ, ವಿಡಿಯೋದಲ್ಲಿ ನಡೆದಿರುವ ಘಟನೆ ರೈಲ್ವೇ ಪ್ಲಾಟ್ಫಾರ್ಮ್ನಲ್ಲಿ ನಡೆದಿದೆ. ಪ್ಲಾಟ್ಫಾರ್ಮ್ನಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾ ಹುಡುಗನೊಬ್ಬ ರೀಲ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಜೊತೆಗೆ ಪಕ್ಕದಿಂದ ಪ್ಲಾಟ್ಫಾರ್ಮ್ಗೆ ರೈಲು ಬರುತ್ತಿರುವುದು ಕಾಣಿಸುತ್ತದೆ. ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ವಯಸ್ಸಾದ ವ್ಯಕ್ತಿಯೊಬ್ಬರು ರೈಲಿನಿಂದ ಇಳಿಯಲು ಪ್ರಾರಂಭಿಸುತ್ತಾರೆ. ಆಗ ಅವರು ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುತ್ತಾರೆ. ರೀಲ್ಸ್ ಮಾಡುತ್ತಾ ನಿಂತಿದ್ದ ಹುಡುಗ ತಕ್ಷಣ ವಯಸ್ಸಾದ ಆ ವ್ಯಕ್ತಿಯನ್ನು ಎತ್ತಿ ಹಿಡಿದಿದ್ದಾನೆ. ಬಹುಶಃ ಹಾಗೆ ಮಾಡದೇ ಇದ್ದಿದ್ದರೆ ಆ ವ್ಯಕ್ತಿ ರೈಲು ಅಥವಾ ಹಳಿಯ ನಡುವೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಹುಡುಗನ ನಡೆಗೆ ಮೆಚ್ಚುಗೆ
ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ X (ಹಿಂದಿನ Twitter) ನಲ್ಲಿ @Bhincharpooja ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ಹಂಚಿಕೊಳ್ಳುವಾಗ, ‘ಕೆಲವೊಮ್ಮೆ ರೀಲ್ಸ್ ಮಾಡುವವರೂ ಉಪಯೋಗಕ್ಕೆ ಬರುತ್ತಾರೆ, ರೀಲ್ಸ್ನಿಂದ ವೃದ್ಧನ ಪ್ರಾಣ ಉಳಿಯಿತು’ ಎಂದು ಶೀರ್ಷಿಕೆ ಕೊಡಲಾಗಿದೆ. ಸುದ್ದಿ ಬರೆಯುವವರೆಗೂ ಈ ವಿಡಿಯೋವನ್ನು 553.6K ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ವೀಕ್ಷಿಸಿದ ನಂತರ, ಬಳಕೆದಾರರು “ಇಂದು ಇವರ ರೀಲ್ಸ್ ಬೇರೆಯವರ ಜೀವವನ್ನು ಉಳಿಸಿದೆ, “ಏನೋ ಉಪಯುಕ್ತವಾಗಿದೆ”, “ಇದು ಉತ್ತಮ ಕೆಲಸ ಸಹೋದರ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ನೀವು ತಿಳಿಸಿ.