Health Tips: ಡ್ರೈ ಫ್ರೂಟ್ಸ್ (ಒಣ ಹಣ್ಣುಗಳು) ಪೌಷ್ಠಿಕಾಂಶಗಳ ಕಣಜ. ಇದನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಉತ್ತಮ ಕೊಬ್ಬು ಸಿಗುತ್ತದೆ. ಸ್ನಾಯುಗಳು ಬಲಗೊಳ್ಳುತ್ತವೆ. ಅಷ್ಟೇ ಅಲ್ಲ, ಒಟ್ಟಾರೆ ಆರೋಗ್ಯಕ್ಕಾಗಿ ಡ್ರೈ ಫ್ರೂಟ್ಸ್ ಸೇವಿಸಲು ಸಲಹೆ ನೀಡಲಾಗುತ್ತದೆ. ನೀವು ಈ ಒಣ ಹಣ್ಣುಗಳನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಅವುಗಳನ್ನು ನೆನೆಸಿ ಅಥವಾ ಹಾಗೆಯೇ ತಿನ್ನಬಹುದು ಅಥವಾ ಯಾವುದೇ ಸಿಹಿ ಖಾದ್ಯ ಅಥವಾ ಸಲಾಡ್ಗೆ ಸೇರಿಸಿ ಸೇವಿಸಬಹುದು. ಆದರೆ ಇಂದು ತಜ್ಞರ ಪ್ರಕಾರ, ಯಾವ ಡ್ರೈ ಫ್ರೂಟ್ಸ್ ಅನ್ನು ನೆನೆಸಿ ತಿನ್ನಬಹುದು, ಮತ್ತೆ ಯಾವುದನ್ನು ನೆನೆಸದೆ ತಿನ್ನಬಹುದು ಎಂದು ನೋಡೋಣ…ಜೊತೆಗೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳನ್ನು ನೋಡೋಣ…
ನೀರಿನಲ್ಲಿ ನೆನೆಸಿ ಸೇವಿಸಬಹುದಾದ ಡ್ರೈ ಫ್ರೂಟ್ಸ್
ಬಾದಾಮಿ
ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟರೆ ಸುಲಭವಾಗಿ ಜೀರ್ಣವಾಗುತ್ತದೆ. ಅಷ್ಟೇ ಅಲ್ಲ, ನೆನೆಸಿದ ಬಾದಾಮಿಯಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹೆಚ್ಚಾಗುತ್ತದೆ. ನೀವು ಬಾದಾಮಿಯನ್ನು 7-8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಬಹುದು.
ಒಣದ್ರಾಕ್ಷಿ
ತಜ್ಞರ ಪ್ರಕಾರ, ನೆನೆಸಿದ ಒಣದ್ರಾಕ್ಷಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಒಣದ್ರಾಕ್ಷಿಗಳನ್ನು 2 ರಿಂದ 3 ಗಂಟೆಗಳ ಕಾಲ ನೆನೆಸಬಹುದು.
ವಾಲ್ನಟ್
ನೆನೆಸಿದ ವಾಲ್ನಟ್ಸ್ನಲ್ಲಿ ಫೈಟಿಕ್ ಆಮ್ಲದ ಪ್ರಮಾಣವು ಕಡಿಮೆಯಾಗುತ್ತದೆ. ಇದು ಖನಿಜಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ವಾಲ್ ನಟ್ಸ್ ಅನ್ನು 4 ರಿಂದ 6 ಗಂಟೆಗಳ ಕಾಲ ನೆನೆಸಬಹುದು.
ಅಂಜೂರ
ನೆನೆಸಿದ ಅಂಜೂರದ ಹಣ್ಣುಗಳು ಮೃದುವಾಗಿರುತ್ತದೆ. ಜೀರ್ಣಿಸಿಕೊಳ್ಳಲು ಸುಲಭ ಮತ್ತು ಅವುಗಳಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಕೂಡ ಉತ್ತಮವಾಗಿರುತ್ತದೆ. ನೀವು ಅಂಜೂರದ ಹಣ್ಣುಗಳನ್ನು 4 ರಿಂದ 6 ಗಂಟೆಗಳ ಕಾಲ ನೆನೆಸಿ ಸೇವಿಸಬಹುದು.
ಗೋಡಂಬಿ
ಕ್ರೀಮ್ ತರಹ ಆಗಲು ಗೋಡಂಬಿಯನ್ನು ನೀರಿನಲ್ಲಿ ನೆನೆಸಿ. ನಂತರ ಅವುಗಳನ್ನು ಗ್ರೇವಿ, ಸ್ಮೂಥಿಗಳಂತಹ ಭಕ್ಷ್ಯಗಳಲ್ಲಿ ಮಿಶ್ರಣ ಮಾಡಬಹುದು. ಗೋಡಂಬಿಯನ್ನು ನೆನೆಸಲು ಎರಡರಿಂದ ಮೂರು ಗಂಟೆ ಸಾಕು.
ಪಿಸ್ತಾ
ನೆನೆಸಿದ ಪಿಸ್ತಾ ಸಹ ಬಹಳ ಮೃದುವಾಗಿರುತ್ತದೆ ಮತ್ತು ಅವುಗಳನ್ನು ತಿನ್ನಲು ಹಾಗೂ ಅಗಿಯಲು ಸುಲಭವಾಗುತ್ತದೆ. ನೀವು ಇದನ್ನು ಸಿಹಿ ಭಕ್ಷ್ಯಗಳಲ್ಲಿಯೂ ಬಳಸಬಹುದು. ನೀವು ಪಿಸ್ತಾವನ್ನು 4 ರಿಂದ 6 ಗಂಟೆಗಳ ಕಾಲ ನೆನೆಸಬಹುದು.
ಈ ಡ್ರೈ ಫ್ರೂಟ್ಸ್ ನೆನೆಸಬೇಡಿ
ಹ್ಯಾಝೆಲ್ನಟ್
ಹ್ಯಾಝೆಲ್ನಟ್ನಲ್ಲಿ ಫೈಟಿಕ್ ಆಮ್ಲ ಕಡಿಮೆಯಾಗಿದೆ. ಆದ್ದರಿಂದ ಅದನ್ನು ನೆನೆಸುವುದು ಅನಿವಾರ್ಯವಲ್ಲ, ನೀವು ಅದನ್ನು ನೇರವಾಗಿ ಸೇವಿಸಬಹುದು.
ಪೈನ್ ನಟ್ಸ್
ಪೈನ್ ನಟ್ಸ್ ವಿನ್ಯಾಸ ಮತ್ತು ರುಚಿಯಲ್ಲಿ ಹಗುರವಾಗಿರುತ್ತವೆ. ಅವುಗಳನ್ನು ನೆನೆಸಿದರೆ ಬಹಳ ಮೃದುವಾಗುತ್ತವೆ. ಆದ್ದರಿಂದ ಅವುಗಳನ್ನು ಹಾಗೆಯೇ ಅಥವಾ ಲಘುವಾಗಿ ಹುರಿದು ತಿನ್ನಬಹುದು.
ಖರ್ಜೂರ
ಖರ್ಜೂರವು ನೈಸರ್ಗಿಕವಾಗಿ ಮೃದುವಾಗಿರುತ್ತದೆ. ಆದ್ದರಿಂದ ಅವುಗಳನ್ನು ನೀರಿನಲ್ಲಿ ನೆನೆಸುವ ಅಗತ್ಯವಿಲ್ಲ. ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ.
Disclaimer: ಸುದ್ದಿಯಲ್ಲಿ ನೀಡಲಾದ ಕೆಲವು ಮಾಹಿತಿಯು ಮಾಧ್ಯಮ ವರದಿಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಕಾರ್ಯಗತಗೊಳಿಸುವ ಮೊದಲು, ನೀವು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಬೇಕು.