“ಕಷ್ಟಪಟ್ಟು ದುಡಿಯುವವನಿಗೆ ಖಂಡಿತ ಯಶಸ್ಸು ಸಿಗುತ್ತದೆ. ಮುಳುಗಿ ಸಾಯುವ ಭಯದಿಂದ ನೀರಿಗೆ ಇಳಿಯದೆಯೇ ದಡದಲ್ಲಿ ಕುಳಿತವನು ಏನನ್ನೂ ಸಾಧಿಸುವುದಿಲ್ಲ” ಎಂದು ಸಂತ ಕಬೀರರು ತಮ್ಮ ದ್ವಿಪದಿಯಲ್ಲಿ ಉಲ್ಲೇಖಿಸಿರುವುದನ್ನು ನಾವೆಲ್ಲಾ ಕೇಳಿದ್ದೇವೆ ಅಥವಾ ಓದಿರುತ್ತೇವೆ.
ಆದರೆ ಐಎಎಸ್ ಅಧಿಕಾರಿ ಕೆ. ಜೈಗಣೇಶ್ ಅವರು ತಮ್ಮ ಜೀವನದಲ್ಲಿ ಈ ದ್ವಿಪದಿಯ ಮೊದಲ ಸಾಲನ್ನು ನಿಜವಾಗಿಸಿದ್ದಾರೆ. ಹೌದು, ಐಎಎಸ್ ಪರೀಕ್ಷೆಯಲ್ಲಿ 6 ಬಾರಿ ಫೇಲ್ ಆದ ನಂತರವೂ ಅವರ ಆತ್ಮವಿಶ್ವಾಸ ಕುಂದಲಿಲ್ಲ ಎಂದರೆ ನೀವು ನಂಬುತ್ತೀರಾ?. UPSC ಪರೀಕ್ಷೆ ಬರೆಯುವವರು ಬಹತೇಕ ಓದಿನ ಕಡೆ ಗಮನಹರಿಸುತ್ತಾರೆಯೇ ಹೊರತು, ಇತರ ದೊಡ್ಡ ಜವಾಬ್ದಾರಿಗಳನ್ನು ಹೊರುವುದಿಲ್ಲ. ಏಕೆಂದರೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಅಷ್ಟು ಸಲೀಸಾಗಿ ದಕ್ಕುವುದಿಲ್ಲ. ಆದರೆ ಓರ್ವ ಮಾಣಿಯೂ ಐಎಎಸ್ ಅಧಿಕಾರಿಯಾಗಬಹುದೆಂದು ತೋರಿಸಿಕೊಟ್ಟವರು ಜೈಗಣೇಶ್. ಇಷ್ಟು ಕೇಳಿದ ಮೇಲೆ ನಿಮ್ಮ ತಲೆಯಲ್ಲಿ ಜೈಗಣೇಶ್ ಅವರ ಕುರಿತಾಗಿ ನೂರಾರು ಪ್ರಶ್ನೆಗಳು ಓಡುತ್ತಿದ್ದರೆ ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ…
ಬಡ ಕುಟುಂಬದಿಂದ ಬಂದವರು
ಜೈಗಣೇಶ್ ತಮಿಳುನಾಡಿನ ವಿನ್ನಮಂಗಲಂ ನಿವಾಸಿ. ಇವರು ಅತ್ಯಂತ ಬಡ ಕುಟುಂಬದಿಂದ ಬಂದವರು. ನಾಲ್ವರು ಸಹೋದರರ ಪೈಕಿ ಹಿರಿಯರು. ಎಂಟನೇ ತರಗತಿವರೆಗೆ ಓದಿದ ನಂತರ ತಮ್ಮ ಹಳ್ಳಿಯಿಂದ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಪಡೆದರು. ಪಾಲಿಟೆಕ್ನಿಕ್ ನಲ್ಲಿ ಶೇ.91 ಅಂಕ ಗಳಿಸಿ ತೇರ್ಗಡೆಯಾದರು. ಇದಾದ ನಂತರ ತಂಥೈ ಪೆರಿಯಾರ್ ಗವರ್ನ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ಗೆ ಪ್ರವೇಶ ಪಡೆದರು.
ರಾತ್ರಿ ತನಕ ಮಾಣಿ ಕೆಲಸ, ಆಮೇಲೆ ಓದು
ಓದು ಮುಗಿದ ನಂತರ ಕಂಪನಿಯೊಂದರಲ್ಲಿ ಮೊದಲ ನೌಕರಿ ಸಿಕ್ಕಿತು. ಅಲ್ಲಿ ಪ್ರತಿ ತಿಂಗಳು ಕೇವಲ 2,500 ರೂ. ಸಿಗುತ್ತಿತ್ತು. ಜೈಗಣೇಶ್ ಅವರಿಗೆ ಸಂಸಾರದ ಜವಾಬ್ದಾರಿಯೂ ಇದ್ದುದರಿಂದ ಮನೆ ಖರ್ಚಿಗೆ ಬೇರೆ ಸರ್ಕಾರಿ ನೌಕರಿ ಹುಡುಕಬೇಕು ಅನ್ನಿಸಿತು. ಇದೇ ವೇಳೆ ಬಿಲ್ಲಿಂಗ್ ಕ್ಲರ್ಕ್ ಆಗಿಯೂ ಕೆಲನ ಮಾಡಿದರು. ಈ ಸಮಯದಲ್ಲಿ ಅವರು ತಮ್ಮ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. ನಂತರ ಅವರು ರೆಸ್ಟೋರೆಂಟ್ನಲ್ಲಿ ಮಾಣಿಯಾಗಿಯೂ ಕೆಲಸ ಮಾಡಿದರು. ಇದರಿಂದ ಮನೆಯ ಆರ್ಥಿಕ ಅಗತ್ಯಗಳನ್ನು ಪೂರೈಸಬಹುದು ಎಂಬುದು ಅವರ ಲೆಕ್ಕಚಾರವಾಗಿತ್ತು. ಹಾಗಾಗಿ ರಾತ್ರಿ ಮಾಣಿ ಕೆಲಸ ಮುಗಿಸಿ ವಾಪಾಸ್ ಆದ ನಂತರ ದಿನವೂ ತಪ್ಪದೆ ಓದುತ್ತಿದ್ದರು.
ಈ ಬಾರಿ ಸಿಕ್ಕಿತು ಪರಿಶ್ರಮಕ್ಕೆ ಫಲ
ಹೆಚ್ಚು ಕಡಿಮೆ ಆರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರು. ಆದರೆ ಪ್ರತಿ ಬಾರಿ ಪ್ರಿಲಿಮ್ಸ್ ಅಥವಾ ಮುಖ್ಯ ಪರೀಕ್ಷೆಯಲ್ಲಿ ವಿಫಲರಾಗುತ್ತಿದ್ದರು. ಆದರೆ ಅವರು ಎಂದಿಗೂ ಪ್ರಯತ್ನ ಬಿಡಲಿಲ್ಲ. ಯುಪಿಎಸ್ಸಿ ತಯಾರಿ ನಡೆಸುವಾಗ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಏತನ್ಮಧ್ಯೆ, ಅವರು ಇಂಟೆಲಿಜೆನ್ಸ್ ಬ್ಯೂರೋಗೆ ಆಯ್ಕೆಯಾದರು. ಆದರೆ ಅವರು ಆ ಕೆಲಸವನ್ನು ತಿರಸ್ಕರಿಸಿದರು ಮತ್ತು ಏಳನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾದರು. ಈ ಬಾರಿ ಅವರ ಪರಿಶ್ರಮಕ್ಕೆ ಫಲ ಸಿಕ್ಕಿತು. 2008ರಲ್ಲಿ ನಡೆದ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 156ನೇ ರಾಂಕ್ ಪಡೆದರು. ಒಬ್ಬ ವ್ಯಕ್ತಿಯ ನಿರ್ಧಾರ ಖಂಡಿತವಾಗಿಯೂ ಅವನಂದುಕೊಂಡ ಸ್ಥಾನಕ್ಕೆ ಕೊಂಡೊಯ್ಯುತ್ತದೆ, ಬಡತನವು ಯಾರ ಯಶಸ್ಸಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದು ಜೈಗಣೇಶ್ ಅವರ ಜೀವನ ನೋಡಿದ ಮೇಲೆ ಎಲ್ಲರಿಗೂ ತಿಳಿಯುತ್ತದೆ ಅಲ್ಲವೇ…