ಯಾವುದೇ ಉತ್ಪನ್ನಕ್ಕಾಗಲೀ ಒಂದು ಮುಕ್ತಾಯದ ಅವಧಿ ಎಂಬುದಿರುತ್ತದೆ. ಅದು ಮುಗಿದ ನಂತರ ನಾವೆಲ್ಲಾ ಖಂಡಿತವಾಗಿ ಎಸೆಯುತ್ತೇವೆ. ಏಕೆಂದರೆ ಉತ್ಪನ್ನದ ಅವಧಿ ಮುಗಿದ ತಕ್ಷಣ, ಅದರ ಎಫೆಕ್ಟ್ಸ್ ಅಥವಾ ಪವರ್ ಕಡಿಮೆಯಾಗುವುದರಿಂದ ಅಥವಾ ಅದು ನಮಗೆ ಹಾನಿ ಮಾಡುವುದರಿಂದ ಅದನ್ನು ಎಸೆಯಬೇಕು ಎಂದು ಹೇಳಲಾಗುತ್ತದೆ. ಆದರೆ ಲೀಫೊಬೆರಿಯ ಬ್ರ್ಯಾಂಡ್ನ ಸಂಸ್ಥಾಪಕರಾದ ಗಜಲ್ ಬಾಬೆಲ್ ಕೊಠಾರಿ ಈ ಕುರಿತು ಪ್ರಶ್ನಿಸಿದ್ದಾರೆ. ಅಂದರೆ ಅವರ ಪ್ರಕಾರ, ಅವಧಿ ಮುಗಿಯುವ ತ್ವಚೆ ಉತ್ಪನ್ನಗಳು ಕೆಲವೊಮ್ಮೆ ತಾಜಾ ಉತ್ಪನ್ನಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿರಬಹುದು ಎಂದು ಹೇಳುತ್ತಾರೆ.
“ಒಂದು ಉತ್ಪನ್ನವು ಅದರ ಅವಧಿ ಮುಗಿಯುವ ದಿನಾಂಕವನ್ನು ಸಮೀಪಿಸುತ್ತಿದ್ದಂತೆ, ಅದು ತನ್ನ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಅನೇಕ ಜನರು ನಂಬುತ್ತಾರೆ, ಆದರೆ ಇದು ನಿಜವಲ್ಲ” ಎಂದು ಗಜಲ್ ಹೇಳುತ್ತಾರೆ. “ವಾಸ್ತವವಾಗಿ, ವಿಟಮಿನ್ ಸಿ ಮತ್ತು ಸಸ್ಯದ ಸಾರಗಳನ್ನೊಳಗೊಂಡ ಕೆಲವು ಪದಾರ್ಥಗಳು ಅವುಗಳ ಜೀವಿತಾವಧಿಯ ಅಂತ್ಯದವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ” ಎಂದು ತಿಳಿಸಿದ್ದಾರೆ ಗಜಲ್. ಇವರ ಮಾತನ್ನು ಕೇಳಿದ ನಂತರ ತ್ವಚೆ ಆರೈಕೆ ಉತ್ಪನ್ನಗಳ Expiry Date ಬಗ್ಗೆ ನಮಗಿರುವ ಆಲೋಚನೆ ಸಂಪೂರ್ಣವಾಗಿ ಬದಲಾಗುತ್ತದೆ.
ಹೌದು, ವರ್ಷಗಳಿಂದ ತ್ವಚೆ ಆರೈಕೆಯ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಗಜಲ್, ಮುಕ್ತಾಯ ದಿನಾಂಕಗಳು ಕೇವಲ ಗುಣಮಟ್ಟದ ನಿಯಂತ್ರಣ ಸೂಚಕವಾಗಿದೆ, ಉತ್ಪನ್ನವು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂಬ ಖಚಿತ ಸಂಕೇತವಲ್ಲ ಎಂದು ವಿವರಿಸುತ್ತಾರೆ. ” Expiry Date ಸಮೀಪಿಸುತ್ತಿದೆ ಎಂದರೆ ಉತ್ಪನ್ನವು ಕೆಟ್ಟುಹೋಗಿದೆ ಎಂದಲ್ಲ. ಉತ್ಪನ್ನವು ಅದರ ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಉತ್ತರ ಸರಳವಾಗಿದೆ. ಉತ್ಪನ್ನವನ್ನು ನಾವು ಸರಿಯಾಗಿ ಸಂಗ್ರಹಿಸಿದರೆ, ತೆರೆಯದೆ ಮತ್ತು ಸರಿಯಾಗಿ ಬಳಸಿದರೆ, ಅದು ಅದರ ಮುಕ್ತಾಯ ದಿನಾಂಕದ ಹತ್ತಿರವೂ ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಉಳಿಯಬಹುದು.” ಎಂದು ತಿಳಿಸಿದ್ದಾರೆ.
Also Read: ಮಹಾತ್ಮ ಗಾಂಧೀಜಿಯವರ ಈ ಭಾಷಣ ಅದೆಷ್ಟು ಪವರ್ಫುಲ್ ಆಗಿತ್ತೆಂದ್ರೆ ಜನ ಇಂದಿಗೂ ನೆನಪು ಮಾಡಿಕೊಳ್ತಾರೆ!
ಗಜಲ್ ಅವರ ದೃಷ್ಟಿಕೋನವು ಕೇವಲ ಉತ್ಪನ್ನಗಳ ಪರಿಣಾಮಕಾರಿತ್ವದ ಬಗ್ಗೆ ಮಾತ್ರವಲ್ಲ, ಸೌಂದರ್ಯ ಉದ್ಯಮದಲ್ಲಿ ವ್ಯರ್ಥ ಸಂಸ್ಕೃತಿಯನ್ನು ಸವಾಲು ಮಾಡುವ ಬಗ್ಗೆಯೂ ಇದೆ. “ನಾವು ಬದುಕುತ್ತಿರುವ ಜಗತ್ತಿನಲ್ಲಿ ಸುಸ್ಥಿರತೆ ಎಂದಿಗಿಂತಲೂ ಈಗ ಹೆಚ್ಚು ಮುಖ್ಯವಾಗಿದೆ. ಗ್ರಾಹಕರು ಅವಧಿ ಮುಗಿದ ಉತ್ಪನ್ನಗಳನ್ನು ಎಸೆಯುವ ಮೊದಲು ಎರಡು ಬಾರಿ ಯೋಚಿಸಬೇಕು. ಅವುಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಪರಿಸರಕ್ಕೆ ಮಾತ್ರವಲ್ಲ, ಆರ್ಥಿಕವಾಗಿಯೂ ಪ್ರಯೋಜನಕಾರಿಯಾಗಿದೆ” ಎಂದು ಗಜಲ್ ಹೇಳುತ್ತಾರೆ.
ಗಜಲ್ನ ಸಂದೇಶ ಸ್ಪಷ್ಟವಾಗಿದೆ: “ಅವಧಿ ಮುಗಿದ ಉತ್ಪನ್ನಗಳನ್ನು ನಿರ್ಲಕ್ಷಿಸಬೇಡಿ ಮತ್ತು ಅವುಗಳನ್ನು ಬಳಸುವುದರಿಂದ ನಿಮ್ಮ ಚರ್ಮದ ಆರೈಕೆ ದಿನಚರಿಯನ್ನು ಹೆಚ್ಚು ಸುಸ್ಥಿರಗೊಳಿಸಬಹುದು” ಎಂದು ಅವಧಿ ಮುಗಿಯುವ ಉತ್ಪನ್ನಗಳ ಪ್ರಯೋಜನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಿದ್ದಾರೆ ಗಜಲ್. ಅವರು ನಮಗಿರುವ ತ್ವಚೆ ಆರೈಕೆಯ ದೃಷ್ಟಿಕೋನವನ್ನು ಬದಲಾಯಿಸುವುದಲ್ಲದೆ, ಜನರು ತಮ್ಮ ಚರ್ಮ ಮತ್ತು ಪರಿಸರದ ಬಗ್ಗೆ ಹೆಚ್ಚು ಜಾಗೃತರಾಗುವಂತೆ ಮಾಡುತ್ತಿದ್ದಾರೆ.
ಕೊನೆಯದಾಗಿ ಗಜಲ್ ಹೇಳುವ ಪ್ರಕಾರ, ನಿಮ್ಮ ಉತ್ಪನ್ನಗಳನ್ನು ಗೌರವಿಸಿ ಮತ್ತು ಮುಕ್ತಾಯದ ಹಂತದ ಬಾಟಲಿಯ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ.