Kaho Naa Pyar Hai: ಹೃತಿಕ್ ರೋಷನ್ ಬಾಲಿವುಡ್‌ನ ಸ್ಟಾರ್ ಹೀರೋ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಹೃತಿಕ್ ತಮ್ಮ ಮೊದಲ ಸಿನಿಮಾದಲ್ಲೇ ಯಶಸ್ಸಿನ ಶಿಖರವನ್ನೇರಿದರು. ಹೃತಿಕ್ ರೋಷನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಗ್ರೀಕ್ ಗಾಡ್ ಎಂದೇ ಕರೆಯುತ್ತಾರೆ. ಪವರ್‌ಫುಲ್ ಆಕ್ಷನ್, ಅದ್ಭುತ ನೃತ್ಯ ಮತ್ತು ಅತ್ಯುತ್ತಮ ನಟನೆಯ ಮೂಲಕ ಹೃತಿಕ್ ಪ್ರತಿಯೊಂದು ಚಿತ್ರದಲ್ಲೂ ತಾವೇನೆಂದು ಸಾಬೀತುಪಡಿಸಿದ್ದಾರೆ. ಆದರೆ ನಿಮಗೆ ಗೊತ್ತಾ… ಹೃತಿಕ್ ತಮ್ಮ ಮೊದಲ ಚಿತ್ರದ ಬಗ್ಗೆಯೇ ತುಂಬಾ ಚಿಂತಿತರಾಗಿದ್ದರು. ಹಾಗೇ ಆತಂಕಗೊಂಡಾಗ ಸಹಾಯಕ್ಕಾಗಿ ತಿರುಗಿ ನೋಡಿದ್ದು ಸಲ್ಮಾನ್ ಖಾನ್ ಕಡೆಗೆ.
ಹೃತಿಕ್ ರೋಷನ್ 2000 ರಲ್ಲಿ ತಮ್ಮ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ ʼಕಹೋ ನಾ ಪ್ಯಾರ್ ಹೈʼ (Kaho Naa… Pyaar Hai) ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಇವರೊಂದಿಗೆ ಅಮೀಷಾ ಪಟೇಲ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿದ್ದು ಮಾತ್ರವಲ್ಲದೆ, ಹೃತಿಕ್ ಮತ್ತು ಅಮೀಶಾ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು.
ʼಕಹೋ ನಾ ಪ್ಯಾರ್ ಹೈʼ ಚಿತ್ರದಲ್ಲಿ ನಟಿಸುವಾಗ ಹೃತಿಕ್‌ಗೆ ಕೇವಲ 26 ವರ್ಷ. ಈ ಮೊದಲೇ ಹೇಳಿದ ಹಾಗೆ ತಮ್ಮ ಮೊದಲ ಚಿತ್ರದ ಬಗ್ಗೆ ಹೃತಿಕ್ ತುಂಬಾ ಚಿಂತಿತರಾಗಿದ್ದರು. ಆಗ ಅವರು ಆ ಸಮಯದಲ್ಲಿ ತಮಗಿದ್ದ ಸಮಸ್ಯೆಯ ಬಗ್ಗೆ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಿದ್ದರಂತೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೃತಿಕ್ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಚಿತ್ರಕ್ಕಾಗಿ ಹೃತಿಕ್ ಧ್ಯಾನ ಮಾಡಿದರು, ಹಾಡಿದರು, ಜಿಮ್‌ಗೆ ಹೋದರು ಮತ್ತು ಆ್ಯಕ್ಟಿಂಗ್ ಕ್ಲಾಸ್ಗೆ ತೆರಳಿದರು. ಏಕೆಂದರೆ ಚಿತ್ರದಲ್ಲಿ ಬರುವ ತಮ್ಮ ಎರಡೂ ಪಾತ್ರಗಳಲ್ಲಿ ಸಂಪೂರ್ಣವಾಗಿ ಫಿಟ್ ಆಗಿ ಕಾಣಿಸಿಕೊಳ್ಳಲು ಬಯಸಿದ್ದರು.
“ʼಕಹೋ ನಾ ಪ್ಯಾರ್ ಹೈʼ ಚಿತ್ರದಲ್ಲಿ ನನ್ನದು ದ್ವಿಪಾತ್ರ. ವಿಶೇಷವಾಗಿ ದ್ವಿಪಾತ್ರಗಳಿರುವ ಚಿತ್ರಗಳಲ್ಲಿ ಫಿಟ್ ಮತ್ತು ಪರ್ಫೆಕ್ಟ್ ಆಗಿ ಕಾಣುವುದು ಬಹಳ ಮುಖ್ಯವಾಗುತ್ತದೆ. ಸಿನಿಮಾದಲ್ಲಿ ರೋಹಿತ್ ಮತ್ತು ರಾಜ್ ಇಬ್ಬರ ಲುಕ್‌ನಲ್ಲಿಯೂ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಲು ನಾನು ಒಂದು ವರ್ಷ ತರಬೇತಿ ತೆಗೆದುಕೊಂಡೆ. ಆದರೆ ಯಾವುದೇ ರಿಸಲ್ಟ್ ಕಾಣಿಸಲಿಲ್ಲ. ಇದಾದ ನಂತರ ನೇರವಾಗಿ ಸಲ್ಮಾನ್ ಖಾನ್ ಗೆ ಕರೆ ಮಾಡಿ ದೇಹ ಫಿಟ್ ಆಗಲು ಟಿಪ್ಸ್ ಕೇಳಿದ್ದೆ. ಆಗ ಸಲ್ಮಾನ್‌ಗೆ ನನ್ನ ಪರಿಚಯವೂ ಇರಲಿಲ್ಲ. ಯಾರು ಹೆಚ್ಚು ಫಿಟ್ ಆಗಿ ಕಾಣುತ್ತಾರೆ ಎಂಬ ಪ್ರಶ್ನೆಯನ್ನು ನಾನೇ ಕೇಳಿಕೊಂಡೆ. ಸಲ್ಮಾನ್ ಖಾನ್ ಅವರಿಂದ ಉತ್ತರ ಬಂದಿದ್ದರಿಂದ ನೇರವಾಗಿ ಅವರ ಬಳಿ ಸಲಹೆ ಕೇಳಿದ್ದೆ” ಎಂದು ಹೃತಿಕ್ ತಿಳಿಸಿದ್ದಾರೆ.