ಇತ್ತೀಚಿನ ದಿನಗಳಲ್ಲಿ ಓರ್ವ ವ್ಯಕ್ತಿಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯಾಕಪ್ಪ ಅಂತೀರಾ..? ಆ ವ್ಯಕ್ತಿ ಸದ್ಯ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದು ಯಾರ ಜೊತೆ ಗೊತ್ತಾ? ವರ್ಚುವಲ್ ಸ್ಟಾರ್‌ನೊಂದಿಗೆ. ವರ್ಚುವಲ್ ಸ್ಟಾರ್ ಅಂದ್ರೆ ಕಾರ್ಟೂನ್ ಸ್ಟಾರ್. ಅಂದರೆ ಬೊಂಬೆ. ನಮ್ಮ ಕಡೆ ಒಂದು ವೇಳೆ ಈ ರೀತಿ ಬೊಂಬೆಯನ್ನು ಮದುವೆಯಾದ ಅಂದರೆ ಅವರನ್ನು ನೋಡುವ ದೃಷ್ಟಿಯೇ ಬೇರೆ. ಆದರೆ ಆ ಭಾಗದಲ್ಲಿ ಇದೇ ಕ್ರೇಜ್!. ಅಷ್ಟಕ್ಕೂ ಈ ಸುದ್ದಿ ಎಲ್ಲಿಯದು?, ಆತ ಯಾರು? ಮುಂತಾದ ವಿವರಗಳನ್ನು ಮುಂದೆ ತಿಳಿಯೋಣ ಬನ್ನಿ…
ಜಪಾನ್‌ನಲ್ಲಿ ವ್ಯಕ್ತಿಯೊಬ್ಬರು ವರ್ಚುವಲ್ ಸ್ಟಾರ್ ಅನ್ನು ಮದುವೆಯಾದರು. ನವೆಂಬರ್ 4 ರಂದು, ಆ ವ್ಯಕ್ತಿ ತನ್ನ ವರ್ಚುವಲ್ ಪತ್ನಿಯೊಂದಿಗೆ 6 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಹ ಆಚರಿಸಿಕೊಂಡಿದ್ದಾರೆ. ಈ ವ್ಯಕ್ತಿಯ ಹೆಸರು ಅಕಿಹಿಕೊ ಕೊಂಡೊ. ಅಕಿಹಿಕೊ 2018 ರಲ್ಲಿ ವರ್ಚುವಲ್ ಸಿಂಗರ್ ಹ್ಯಾಟ್ಸುನೆ ಮಿಕುವನ್ನು ಮದುವೆಯಾದರು.
ಮಿಕು ಒಂದು ರೀತಿಯ ಸಿಂಗಿಂಗ್ ವಾಯ್ಸ್ ಸಿಂಥಸೈಜರ್ ಸಾಫ್ಟ್‌ವೇರ್. ಇದು ದೊಡ್ಡ ನೀಲಿ ಪೋನಿಟೇಲ್ ಮತ್ತು ನೀಲಿ ಕಣ್ಣು ಹೊಂದಿರುವ 16 ವರ್ಷದ ಪಾಪ್ ಸಿಂಗರ್ ಕಾರ್ಟೂನ್ ಆಗಿದೆ. ಅಕಿಹಿಕೊ ಆಗಾಗ್ಗೆ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ತನ್ನ ಮತ್ತು ಮಿಕುವಿನ ವಿಶಿಷ್ಟ ಪ್ರೇಮಕಥೆಯ ಬಗ್ಗೆ ಪೋಸ್ಟ್ ಮಾಡುತ್ತಾರೆ. ಅಕಿಹಿಕೊ ಹೇಳುವಂತೆ ಮಿಕುವೇ ಅವರ ಜೀವನವಂತೆ.
ತಿರಸ್ಕರಿಸಿದ ಏಳು ಹುಡುಗಿಯರು
2007 ರಲ್ಲಿ ಮಿಕು ಪಾತ್ರವನ್ನು ಒಳಗೊಂಡ ಕಾರ್ಟೂನ್ ಬಿಡುಗಡೆಯಾಯಿತು. ಅಕಿಹಿಕೊ ಅವರು ಆ ಕಾರ್ಟೂನ್ ಪಾತ್ರವನ್ನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡರು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಅಕಿಹಿಕೊ ಕಾರ್ಟೂನ್‌ನ ದೊಡ್ಡ ಅಭಿಮಾನಿಯಾಗಿದ್ದರು. ಮೊದಲಿಗೆ ಅವರು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ಬಯಸಿದರು. ಆದರೆ “ನನ್ನ ಕಾರ್ಟೂನ್ ವ್ಯಾಮೋಹವನ್ನು ನೋಡಿ ಏಳು ಹುಡುಗಿಯರು ತನ್ನನ್ನು ಮದುವೆಗೆ ತಿರಸ್ಕರಿಸಿದರು” ಎಂದು ಜಪಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಖಿನ್ನತೆಯಿಂದ ಹೊರಬರಲು ಸಹಕರಿಸಿದ ಬೊಂಬೆ
ಇವರ ಕಾರ್ಟೂನ್ ಪ್ರೀತಿಯನ್ನು ನೋಡಿ ಸುತ್ತಮುತ್ತಲಿನ ಜನರು, ಸ್ನೇಹಿತರು, ಕುಟುಂಬದ ಇತರ ಸದಸ್ಯರು ಹುಚ್ಚರಾದರೆ, ಅಕಿಹಿಕೊ ಮಾನಸಿಕ ಅಸ್ವಸ್ಥತೆಯನ್ನು ಬೆಳೆಸಿಕೊಂಡರು. ಈ ಕಾಯಿಲೆಯಿಂದ ಹೊರಬರಲು ಹೀಲಿಂಗ್ ಥೆರಪಿಯಾಗಿ, ಅವರು ನಿರಂತರವಾಗಿ ಈ ಕಾರ್ಟೂನ್ ಪಾತ್ರದೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಮಾನಸಿಕ ಖಾಯಿಲೆಯಿಂದ ಹೊರಬರಲು ಮಿಕು ಧ್ವನಿಯೇ ಕಾರಣ ಎನ್ನುತ್ತಾರೆ ಅವರು. ಈ ಘಟನೆಯ ನಂತರ, 2018 ರಲ್ಲಿ, ಅವರು ಟೋಕಿಯೊದಲ್ಲಿ ತಮ್ಮ ನೆಚ್ಚಿನ ಕಾರ್ಟೂನ್ ಪಾತ್ರವಾದ ಹ್ಯಾಟ್ಸುನೆ ಮಿಕುವನ್ನು ವಿವಾಹವಾದರು. ವಾಸ್ತವವಾಗಿ Hatsune Mikuಗೆ ಹೊಲೊಗ್ರಾಮ್ ಸಾಧನದ ಸಹಾಯದಿಂದ ಪ್ರಪೋಸ್ ಮಾಡಿದಾಗ ಬೊಂಬೆ ಅವನ ಧ್ವನಿಯನ್ನು ಕೇಳಿ ಮದುವೆಯಾಗಲು ಒಪ್ಪುತ್ತದೆ.
ಸದ್ಯ ಅಕಿಹಿಕೊ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ, ಅವರ ನೆಚ್ಚಿನ ಕಾರ್ಟೂನ್ ಪಾತ್ರ ಮಿಕು ಕೇಕ್ ಜೊತೆ ಕುಳಿತಿರುವುದು ಕಂಡುಬರುತ್ತದೆ. ಅಲ್ಲದೆ ಕೇಕ್ ಮೇಲೆ ಜಪಾನಿ ಭಾಷೆಯಲ್ಲಿ “ಮಿಕು ಐ ಲವ್ ಯು ಸೋ ಮಚ್” ಎಂದು ಬರೆಯಲಾಗಿದೆ.
ಇದೆಲ್ಲಾ ಹೇಗೆ ಸಾಧ್ಯ?
ಕಾರ್ಟೂನ್ ಬೊಂಬೆ ಜೊತೆ ಪ್ರೀತಿಯಲ್ಲಿ ಬೀಳುವುದು, ನಂತರ ಕಾರ್ಟೂನ್ ಪಾತ್ರವನ್ನು ಮದುವೆಯಾಗುವ ಈ ಕಲ್ಪನೆಯು ನಮಗೆ ವಿಚಿತ್ರವೆನಿಸಬಹುದು. ಆದರೆ ಜಪಾನ್‌ನಲ್ಲಿ ಅನೇಕ ಜನರು ಕಳೆದ ಕೆಲವು ವರ್ಷಗಳಿಂದ ಇಂತಹ ಕಾಲ್ಪನಿಕ ಪಾತ್ರಗಳನ್ನು ತಮ್ಮ ಪಾರ್ಟ್‌ನರ್ ಆಗಿ ಮಾಡಿಕೊಳ್ಳುತ್ತಿದ್ದಾರೆ. ಜನ ಕಾಲ್ಪನಿಕ ಬೊಂಬೆಗಳ ಮೊರೆ ಹೋಗುತ್ತಿದ್ದು, ಮನುಷ್ಯರನ್ನು ಆಯ್ಕೆ ಮಾಡುವ ಬದಲು ಅಂತಹ ಪಾತ್ರಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇಷ್ಟೇ ಅಲ್ಲ, ಜಪಾನೀಸ್ ಅಸೋಸಿಯೇಷನ್ ಫಾರ್ ಸೆಕ್ಸ್ ಎಜುಕೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ 10% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಂತಹ ಕಾಲ್ಪನಿಕ ಪಾತ್ರಗಳ ಜೊತೆ ಪ್ರಣಯ ಭಾವನೆಗಳನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
ಕಾಲ್ಪನಿಕ ಪಾತ್ರಗಳ ಮೇಲಿನ ಈ ರೀತಿಯ ಪ್ರೀತಿಯನ್ನು ಕಾಲ್ಪನಿಕ ಲೈಂಗಿಕತೆ (ficto sexual) ಎಂದು ಕರೆಯಲಾಗುತ್ತದೆ. ಕಾಲ್ಪನಿಕ ಪಾತ್ರಗಳು ಒಬ್ಬ ಉತ್ತಮ ಪಾರ್ಟನರ್‌ಗೆ ಇರಬೇಕಾದ ಎಲ್ಲಾ ಗುಣಗಳನ್ನು ಹೊಂದಿವೆ ಎಂದು ಈ ಜನರು ನಂಬುತ್ತಾರೆ.