ಫಾರ್ಮ್ ಆರ್ಗ್ ಫುಡ್ಸ್…ಇತ್ತೀಚಿನ ದಿನಗಳಲ್ಲಿ ಈ ಕಂಪೆನಿಯ ಹೆಸರು ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನು 2021 ರಲ್ಲಿ ಸಾಯಿ ವರ್ಧನ್ ಗೌಡ್ ಎಂಬುವವರು ಕೇವಲ 5,000 ರೂಪಾಯಿಂದ ಆರಂಭಿಸಿದರು. ಆದರೆ ಈಗ ಕಂಪೆನಿಯ ಆದಾಯ ಪ್ರತಿ ತಿಂಗಳು 5 ಲಕ್ಷದವರೆಗಿದ್ದು, ಸಾವಯವ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಉಪ್ಪಿನಕಾಯಿಗಳನ್ನು ಅವರು ಮಾರಾಟ ಮಾಡುತ್ತಾರೆ. ಇವರ ಉತ್ಪನ್ನಗಳ ಬೇಡಿಕೆಯು ಅಮೆರಿಕ ಮತ್ತು ಬ್ರಿಟನ್ಗೆ ವಿಸ್ತರಿಸಿದೆ. ಹಾಗಾದರೆ ಬನ್ನಿ, ಸಾಯಿವರ್ಧನ್ ಗೌಡ್ ಅವರ ಯಶಸ್ಸಿನ ಬಗ್ಗೆ ಇಲ್ಲಿ ತಿಳಿಯೋಣ.
ಕಂಪೆನಿ ಆರಂಭವಾದದ್ದು ಹೀಗೆ…
ಸಾಯಿ ವರ್ಧನ್ ಗೌಡ್ ಅವರು 2017 ಮತ್ತು 2019 ರ ನಡುವೆ ಎರಡು ವರ್ಷಗಳ ಡಿಪ್ಲೊಮಾವನ್ನು ಪೂರ್ಣಗೊಳಿಸಿದ ತಕ್ಷಣ ಬೆಂಗಳೂರಿನ ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಕಂಪನಿ 22 ಸಾವಿರ ರೂ. ಸಂಬಳ ಕೊಡುತ್ತಿತ್ತು. ಆದರೆ ಅವರು ಈ ಕೆಲಸದಿಂದ ಹೆಚ್ಚು ಸಂತೋಷವಾಗಿರಲಿಲ್ಲ. ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿಯೇ ಕೇವಲ ಆರು ತಿಂಗಳ ನಂತರ ಕೆಲಸ ಬಿಟ್ಟರು. ಮೂಲತಃ ಆಂಧ್ರಪ್ರದೇಶದವರಾದ ಸಾಯಿ ಅವರು ವ್ಯಾಪಾರ ಮಾಡಲು ತಮ್ಮ ಗ್ರಾಮ ತೊಟ್ಟಪಲ್ಲಿಗೆ ಮರಳಿದರು. ಸಾಯಿ ಅವರು ಕೃಷಿಯೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದರು. ಹಾಗಾಗಿಯೇ ಜನರು ಸಾವಯವ ವಸ್ತುಗಳನ್ನು ಇಷ್ಟಪಡುತ್ತಾರೆ ಎಂದು ಅವರು ಅರಿತುಕೊಂಡರು. ಇದನ್ನು ಯೋಚಿಸಿ, ಅವರು 2021ರಲ್ಲಿ ಫಾರ್ಮ್ ಆರ್ಗ್ ಫುಡ್ಸ್ ಅನ್ನು ಪ್ರಾರಂಭಿಸಿದರು.
Must Read: ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…
ಸೋಶಿಯಲ್ ಮೀಡಿಯಾದಲ್ಲಿ ಮಾರಾಟ
ಸಾಯಿ ವರ್ಧನ್ ಮೊದಲು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಸಾವಯವ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ವ್ಯಾಪಾರ ಪ್ರಾರಂಭಿಸಿದರು. ಜನರು ನೇರವಾಗಿ ಹೊಲಗಳಿಂದ ಮಾವಿನ ಹಣ್ಣುಗಳನ್ನು ಪಡೆಯಲಾರಂಭಿಸಿದರು. ಜೊತೆಗೆ ತುಂಬಾ ಇಷ್ಟಪಟ್ಟರು. ಆಗ ಸಾಯಿ ಅವರು ಇನ್ನು ಹೆಚ್ಚು ಹೆಚ್ಚು ಮಾರಾಟ ಮಾಡಬಹುದು ಎಂದು ಯೋಚಿಸಿದರು. ಕೊನೆಗೆ ತಮ್ಮ ತಾಯಿಯ ಉಪ್ಪಿನಕಾಯಿ ವ್ಯಾಪಾರವನ್ನು ವಿಸ್ತರಿಸಲು ನಿರ್ಧರಿಸಿದರು. ಅಷ್ಟೇ ಅಲ್ಲ, ಅವರು ಇದು ಹೇಗೆ ಸಾವಯವ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳುತ್ತಿದ್ದರು. ಈ ಮೂಲಕ ಜನರ ವಿಶ್ವಾಸ ಗಳಿಸಿದರು.
ಮುಂದಿನ ಪ್ಲಾನ್ ಏನು?
ಇಂದು ಫಾರ್ಮ್ ಆರ್ಗ್ ಫುಡ್ಸ್ ವಿವಿಧ ತರಕಾರಿಗಳು, ಹಣ್ಣುಗಳು ಮತ್ತು ಉಪ್ಪಿನಕಾಯಿಗಳನ್ನು ಮಾರಾಟ ಮಾಡುತ್ತದೆ. ಇವೆಲ್ಲವೂ ಸಾವಯವ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಇವುಗಳನ್ನು ತುಂಬಾ ಇಷ್ಟಪಡುತ್ತಾರೆ. ಫಾರ್ಮ್ ಆರ್ಗ್ ಫುಡ್ಸ್ ಈಗ ಭಾರತದಾದ್ಯಂತ ಮಾರಾಟವಾಗುತ್ತಿದೆ. ಅಮೆರಿಕ ಮತ್ತು ಬ್ರಿಟನ್ನಲ್ಲಿಯೂ ಅವರ ಉಪ್ಪಿನಕಾಯಿಗೆ ಬೇಡಿಕೆಯಿದೆ.
ಈ ವ್ಯಾಪಾರದಿಂದ ಸಾಯಿವರ್ಧನ್ ಹಳ್ಳಿಯ ಮಹಿಳೆಯರನ್ನೂ ಸಬಲೀಕರಣಗೊಳಿಸುತ್ತಿದ್ದಾರೆ. ಫಾರ್ಮ್ ಆರ್ಗ್ ಫುಡ್ಸ್ ನಲ್ಲಿ 20 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ಉತ್ತಮ ಆದಾಯವನ್ನು ಗಳಿಸುತ್ತಾರೆ. ಇದು ಅವರ ಜೀವನವನ್ನು ಸಹ ಬೆಳಕಾಗಿಸಿದೆ. ಸಾಯಿ ವರ್ಧನ್ ತಮ್ಮ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಬಯಸಿದ್ದಾರೆ. ಹೊಸ ಮಾರುಕಟ್ಟೆಗಳಿಗೆ ಹೋಗಲು, ಸಾವಯವ ಪದಾರ್ಥಗಳನ್ನು ಹೆಚ್ಚು ಮಾರಾಟ ಮಾಡಲು ಸಹ ಯೋಜಿಸಿದ್ದಾರೆ. ಏಕೆಂದರೆ ಇದರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ.