ಸಾಧಕರ ಜೀವನವನ್ನು ನೋಡಿದಾಗ ಅವರು ಅದೆಂಥಾ ಕಷ್ಟದ ಸಂದರ್ಭ ಎದುರಾದಾಗಲೂ ಎದೆಗುಂದದೆ ಸತತವಾಗಿ ಹೋರಾಡುವ ಮೂಲಕ ಸಂಕಷ್ಟದಿಂದ ಹೊರಬಂದು ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಿರುವುದನ್ನು ನಾವೆಲ್ಲಾ ಕೇಳಿದ್ದೇವೆ ಅಥವಾ ನೋಡಿದ್ದೇವೆ ಅಲ್ಲವೇ… ಇದೇ ತರಹ ತಮಿಳುನಾಡಿನ ಮಹಿಳೆಯೊಬ್ಬರು ಪತಿಯ ಮರಣದ ನಂತರ ಕುಟುಂಬದ ಜವಬ್ದಾರಿಯನ್ನು ನೋಡಿಕೊಂಡಿದ್ದು, ಮಾತ್ರವಲ್ಲದೆ ಒಂದೊಳ್ಳೆಯ ಬ್ಯುಸಿನೆಸ್ ಪ್ರಾರಂಭಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹೌದು ಅವರ ಹೆಸರು ಕೋಕಿಲಾ. ಮೂಲತಃ ತಮಿಳುನಾಡಿನವರು. ಇಂದು ಅವರು ತಾವು ಪ್ರಾರಂಭಿಸಿದ ಉದ್ಯಮದಿಂದ ಪ್ರತಿ ತಿಂಗಳು 20-30 ಲಕ್ಷ ರೂ. ಗಳಿಸುತ್ತಾರೆ. ಹಾಗಾದರೆ ಬನ್ನಿ…ಇಂದು ಅವರ ಸ್ಫೂರ್ತಿದಾಯಕ ಕಥೆಯನ್ನು ತಿಳಿಯೋಣ…
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೋಕಿಲಾ ಕುಟುಂಬ
ಕೋಕಿಲಾ ಕೆ ಅವರು ತಮಿಳುನಾಡಿನ ವಾಲಾಜಪೇಟೆಯ ನಿವಾಸಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕೋಕಿಲಾ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದು ನಂತರ ಸರ್ಕಾರಿ ಉದ್ಯೋಗವನ್ನು ಪಡೆದರು. ಕೀಟನಾಶಕ ವಿತರಕನನ್ನು ಮದುವೆಯಾಗಿದ್ದ ಕೋಕಿಲಾ ಮುಂದೆ ತಮ್ಮ ಜೀವನದಲ್ಲಿ ಇಂತಹದೊಂದು ಘಟನೆ ಎದುರಾಗುತ್ತದೆ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಏಕೆಂದರೆ ಕೇವಲ 35 ನೇ ವಯಸ್ಸಿಗೆ ಅವರ ಪತಿಗೆ ಶ್ವಾಸಕೋಶದಲ್ಲಿ ಗೆಡ್ಡೆ ಬೆಳೆಯಿತು, ಈ ಗೆಡ್ಡೆಯು ಕೀಟನಾಶಕಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಮತ್ತು ಧೂಮಪಾನದ ಪರಿಣಾಮವಾಗಿ ಸಂಭವಿಸುತ್ತದೆ. ಅವರ ಪತಿಗೆ ಏಳು ವರ್ಷಗಳ ಕಾಲ ಚಿಕಿತ್ಸೆ ನೀಡಲಾಯಿತು. ಕೊನೆಗೆ ಅವರು 42 ನೇ ವಯಸ್ಸಿನಲ್ಲಿ ನಿಧನರಾದರು. ಆಗ ಕೋಕಿಲಾ ಅವರು ಮೂವರು ಗಂಡು ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು. ಈಗಾಗಲೇ ಪತಿಯ ವೈದ್ಯಕೀಯ ವೆಚ್ಚಗಳು ಅವರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದ್ದವು.
ಹಗಲು ರಾತ್ರಿ ಎನ್ನದೆ ದುಡಿದ ಕೋಕಿಲಾ
ಪತಿಯ ಮರಣದ ನಂತರ ಕೋಕಿಲಾಗೆ ತನ್ನ ಸರ್ಕಾರಿ ಕೆಲಸದಿಂದ ಬರುತ್ತಿದ್ದ ಸಂಬಳದಿಂದ ಮನೆ ನಡೆಸುವುದು ಕಷ್ಟಕರವಾಗುತ್ತಿತ್ತು. ಅವರು ತಮ್ಮ ಮೂವರು ಗಂಡು ಮಕ್ಕಳ ಶಿಕ್ಷಣ ಮತ್ತು ಕುಟುಂಬದ ವೆಚ್ಚಗಳನ್ನು ಪೂರೈಸಲು ಸ್ವಲ್ಪ ಹೆಚ್ಚುವರಿ ಹಣವನ್ನು ಸಂಪಾದಿಸಲು ನಿರ್ಧರಿಸಿದರು. ಅವರ ವ್ಯಾಪಾರ ಪ್ರಯಾಣ ಪ್ರಾರಂಭವಾದದ್ದೇ ಇಲ್ಲಿಂದ. ಮರದ ಪೆಟ್ಟಿಗೆಗಳನ್ನು ಪೂರೈಸುವ ಕೆಲಸವನ್ನು ಪ್ರಾರಂಭಿಸಿದರು. ಇದು ಆಕೆಗೆ ಹೊಸತು. ಆದರೇನಂತೆ ಹಗಲು ಮತ್ತು ರಾತ್ರಿ ಕೋಕಿಲಾ ಹೋರಾಟ ಮುಂದುವರೆಯಿತು.
ತಿರುವು ನೀಡಿದ ಘಟನೆ
ಅನೇಕ ವರ್ಷಗಳ ಕಠಿಣ ಪರಿಶ್ರಮದ ನಂತರ ಕೋಕಿಲಾ ಅವರ ಮಗ ದೊಡ್ಡವನಾಗುತ್ತಾ ಬಂದರು. ಮಗ ತನ್ನ ಉತ್ತಮ ಸಂಬಳದ ಕೆಲಸವನ್ನು ತೊರೆದು ಕುಟುಂಬದ ವ್ಯವಹಾರವನ್ನು ಮುಂದುವರಿಸಲು ನಿರ್ಧರಿಸಿದರು. ಇದು ಅವರಿಗೆ ಒಂದು ದೊಡ್ಡ ತಿರುವು ನೀಡಿತು. ಹೇಗೆಂದರೆ ಒಂದು ದಿನ ಕೋಕಿಲಾ ಮಾರುಕಟ್ಟೆಯು ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಆಟಿಕೆಗಳಿಂದ ತುಂಬಿರುವುದನ್ನು ನೋಡಿದರು. ಇದು ಪರಿಸರ ಮತ್ತು ಮಕ್ಕಳ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನಿಸಿ ಅವರು ಮರದ ಆಟಿಕೆಗಳ ವ್ಯಾಪಾರವನ್ನು ಪ್ರಾರಂಭಿಸಲು ನಿರ್ಧರಿಸಿದರು.
ಆರಂಭ ಸಲೀಸಾಗಿ ಇರಲಿಲ್ಲ
ನಮಗೆಲ್ಲ ಗೊತ್ತಿರುವ ಹಾಗೆ ಮರದ ಆಟಿಕೆಗಳನ್ನು ತಯಾರಿಸುವುದು ಸುಲಭವಲ್ಲ. ಜೊತೆಗೆ ಸ್ವಲ್ಪ ದುಬಾರಿ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಆಟಿಕೆಗಳು ಅಗ್ಗವಾಗಿರುವುದರಿಂದ ಜನರು ಅವುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ ಕೋಕಿಲಾ ಕುಟುಂಬವು ಇದನ್ನೆಲ್ಲಾ ಅಳೆದು ತೂಗಿ ಸಂಪೂರ್ಣವಾಗಿ ವಿಭಿನ್ನವಾದ ತಂತ್ರವನ್ನು ಅಳವಡಿಸಿಕೊಂಡಿತು. ಅದೇನೆಂದರೆ ಪರಿಸರ ಸ್ನೇಹಿ ಮತ್ತು ಸುಸ್ಥಿರ ಆಟಿಕೆಗಳ ಮೇಲೆ ಕೇಂದ್ರೀಕರಣ. ಇದು ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತದೆ. ಹೀಗೆ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಒದಗಿಸುವ ಮೂಲಕ ಸಾಮಾಜಿಕ ಬದಲಾವಣೆ ತರುವತ್ತ ಅಮ್ಮ-ಮಗ ಇಬ್ಬರು ಹೆಜ್ಜೆ ಇಟ್ಟರು. ಆರಂಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಿದರು. ಆದರೆ ಕ್ರಮೇಣ ಅವರ ವ್ಯವಹಾರವು ಬೆಳೆಯಿತು.
ಇಂದು ಅವರ WoodBee Toys ಹೆಸರಿನ ಕಂಪನಿ 110 ಕ್ಕೂ ಹೆಚ್ಚು ಬಗೆಯ ಮರದ ಆಟಿಕೆಗಳನ್ನು ತಯಾರಿಸುತ್ತದೆ ಮತ್ತು ಪ್ರತಿ ತಿಂಗಳು 20-30 ಲಕ್ಷ ರೂ.ಗಳ ವಹಿವಾಟು ಹೊಂದಿದೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ವಿಷಕಾರಿಯಲ್ಲದ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸುತ್ತದೆ.