Success Story: ಒಬ್ಬ ವ್ಯಕ್ತಿಗೆ ಆತ್ಮವಿಶ್ವಾಸ, ಧೈರ್ಯ ಹೆಚ್ಚಾದಾಗ ಅವನು ಸಾಧಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಅಲ್ಲವೇ. ಇಲ್ಲಿ ಐಎಎಸ್ ಅಧಿಕಾರಿ ಗೋವಿಂದ್ ಜೈಸ್ವಾಲ್ ಅವರ ಜೀವನದಲ್ಲೂ ಹೀಗೆ ಆಗಿದೆ. ಜೈಸ್ವಾಲ್ ಐಎಎಸ್ ಅಧಿಕಾರಿಯಾಗಬೇಕೆಂದು ಬಾಲ್ಯದಲ್ಲಿಯೇ ನಿರ್ಧರಿಸಿದ್ದರು. ಬಡವರಾಗಿದ್ದರೂ ಕಠಿಣ ಪರಿಶ್ರಮದಿಂದ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಯಶಸ್ಸನ್ನು ಗಳಿಸಿದರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಣ
ಗೋವಿಂದ್ ಜೈಸ್ವಾಲ್ ಹುಟ್ಟಿದ್ದು ಬನಾರಸ್ ನಲ್ಲಿ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಅವರು ಬನಾರಸ್ ನ ಹರಿಶ್ಚಂದ್ರ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. ಗೋವಿಂದ್ ಅವರ ತಂದೆ ರಿಕ್ಷಾ ಓಡಿಸಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದರು. ಅವರ ತಾಯಿ ಮೆದುಳಿನ ರಕ್ತಸ್ರಾವದಿಂದ ಬಾಲ್ಯದಲ್ಲಿಯೇ ನಿಧನರಾದರು. ತಾಯಿಗೆ ಚಿಕಿತ್ಸೆ ಕೊಡಿಸಲು ತಂದೆ ತನ್ನ ಉಳಿತಾಯವನ್ನೆಲ್ಲ ಹೂಡಿಕೆ ಮಾಡಿದ್ದರು. ಅಷ್ಟೇ ಅಲ್ಲ, ಗೋವಿಂದ್ ಮತ್ತು ಅವರ ಸಹೋದರಿಯರನ್ನು ತುಂಬಾ ಕಷ್ಟಪಟ್ಟು ಬೆಳೆಸಿದರು.
ಗೆಳೆಯನ ತಂದೆಯಿಂದ ಅವಮಾನ
ಬಾಲ್ಯದಲ್ಲಿ ಒಮ್ಮೆ ಗೋವಿಂದ್ ತಮ್ಮ ಗೆಳೆಯನ ಮನೆಗೆ ಅಟವಾಡಲು ಹೋಗಿದ್ದರು. ಅಲ್ಲಿ ಗೋವಿಂದ್ ತಂದೆ ರಿಕ್ಷಾ ಓಡಿಸುತ್ತಾರೆಂದು ಗೆಳೆಯನ ತಂದೆಗೆ ತಿಳಿದಾಗ ಅವರು ಗೋವಿಂದ್ರನ್ನು ತುಂಬಾ ಅವಮಾನಿಸಿದನು. ತನ್ನ ಮಗನ ಜೊತೆ ಆಟವಾಡದಂತೆ ಮತ್ತು ಸ್ನೇಹ ಬೆಳೆಸದಂತೆ ಗೋವಿಂದ್ ಅವರಿಗೆ ತಾಕೀತು ಮಾಡಿದರು. ಇದಾದ ನಂತರ ಅವರು ಶಾಲೆಯಲ್ಲಿ ತಮ್ಮ ಶಿಕ್ಷರರ ಬಳಿಗೆ ಹೋದರು ಮತ್ತು ಸಮಾಜದಲ್ಲಿ ಜನರು ತನ್ನನ್ನು ಗೌರವಿಸಲು ಏನು ಮಾಡಬೇಕು ಎಂದು ಕೇಳಿದರು. ದೊಡ್ಡವನಾದ ಮೇಲೆ ದೊಡ್ಡ ಉದ್ಯಮಿ ಅಥವಾ ಐಎಎಸ್ ಅಧಿಕಾರಿಯಾಗು ಎಂದು ಅವರ ಗುರುಗಳು ಹೇಳಿದ್ದರಂತೆ. ಅಂದಿನಿಂದ ಗೋವಿಂದ್ “ನಾನು ಐಎಎಸ್ ಅಧಿಕಾರಿ ಆಗಬೇಕೆಂದು ನಿರ್ಧರಿಸಿದ್ದರು”.
ಸಿನಿಮಾ ಕೂಡ ಬಂದಿದೆ!
UPSC ಗೆ ತಯಾರಿ ನಡೆಸಲು ಗೋವಿಂದ್ ದೆಹಲಿಗೆ ಬಂದರು. ಅವರ ತಂದೆ ತಿಂಗಳಿಗೆ ಒಂದಿಷ್ಟು ಹಣವನ್ನು ಖರ್ಚಿಗೆ ಕಳುಹಿಸುತ್ತಿದ್ದರು. ಆ ಸಮಯದಲ್ಲಿ ಅವರ ತಂದೆ ಕಾಲಿಗೆ ಸೆಪ್ಟಿಕ್ ಆಗಿದ್ದರೂ ರಿಕ್ಷಾ ಎಳೆಯುತ್ತಿದ್ದರು. ಗೋವಿಂದ್ ಅವರ ತಂದೆ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದಿದ್ದರಿಂದ ಗೋವಿಂದ್ ಪರೀಕ್ಷಾ ತಯಾರಿಯ ಜೊತೆಗೆ ಮಕ್ಕಳಿಗೆ ಟ್ಯೂಷನ್ ಕೂಡ ಹೇಳಿಕೊಡುತ್ತಿದ್ದರು. ‘ಇಚ್ಛೆ ಇರುವ ಕಡೆ ದಾರಿ ಇದೆ’ ಎನ್ನುವ ಗೋವಿಂದ್ ಜೈಸ್ವಾಲ್ 2007 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರ ಆಲ್ ಇಂಡಿಯಾ ರಾಂಕ್ 48 ಆಗಿತ್ತು. ‘ಅಬ್ ದಿಲ್ಲಿ ದೂರ್ ನಹಿ’ ಎಂಬ ಹೆಸರಿನಲ್ಲಿ ಗೋವಿಂದ್ ಜೈಸ್ವಾಲ್ ಅವರ ಜೀವನದ ಮೇಲೆ ಚಲನಚಿತ್ರವನ್ನು ಸಹ ನಿರ್ಮಿಸಲಾಗಿದೆ. ಈ ಚಿತ್ರ 2023 ರಲ್ಲಿ ಬಿಡುಗಡೆಯಾಯಿತು. ಗೋವಿಂದ್ ಜೈಸ್ವಾಲ್ ಅವರ ಕಥೆಯು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಿದೆ.