Coffee Grounds: ಮನೆಯನ್ನು ಸ್ವಚ್ಛಗೊಳಿಸುವುದೆಂದರೆ, ಮನೆಯಲ್ಲಿರುವ ವಸ್ತುಗಳನ್ನು ತಿಕ್ಕಿ ತಿಕ್ಕಿ ತೊಳೆಯುವುದೆಂದರೆ ನಮ್ಮ ಹೆಣ್ಣು ಮಕ್ಕಳಿಗೆ ದೊಡ್ಡ ಟಾಸ್ಕ್. ಕಾರಣವಿಷ್ಟೇ ಕೆಲವೊಮ್ಮೆ ಅದೆಷ್ಟೇ ಸ್ವಚ್ಛಗೊಳಿಸಿದರೂ ಕಠಿಣ ಕಲೆಗಳು ಹೋಗುವುದೇ ಇಲ್ಲ. ಮತ್ತೆ ಕೆಲವರಿಗೆ ಅದಕ್ಕೆಲ್ಲಾ ಖರ್ಚು ಮಾಡೋರು ಯಾರು ಎಂಬ ಭಾವನೆ. ಆದರೆ ಕೊಳಕು ಕಲೆಗಳನ್ನು ತೆಗೆಯಲು, ಕೀಟಗಳ ನಿವಾರಣೆಗೆ, ಗಬ್ಬು ವಾಸನೆ ತೊಲಗಿಸಲು ಮನೆಯಲ್ಲಿ ನಾವು ದಿನ ನಿತ್ಯ ಉಪಯೋಗಿಸುವ ಪದಾರ್ಥಗಳು ಸಹ ಕೆಲಸ ಮಾಡುತ್ತವೆ ಎಂಬುದು ಬಹುತೇಕರಿಗೆ ಗೊತ್ತಿರದ ವಿಚಾರ. ಹಾಗಾದರೆ ಬನ್ನಿ…ಎಲ್ಲರ ಮನೆಯಲ್ಲೂ ಲಭ್ಯವಿರುವ ಉಳಿದ ಕಾಫಿ ಪುಡಿಯ ಸಹಾಯದಿಂದ ಮನೆಯನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂಬುದನ್ನು ನೋಡೋಣ…
ಈ ಮೊದಲೇ ಹೇಳಿದ ಹಾಗೆ ಇನ್ಮುಂದೆ ನೀವು ಮನೆಯನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಿಂದ ಕೆಮಿಕಲ್ ಕ್ಲೀನರ್‌ಗಳನ್ನು ತರುವ ಅಗತ್ಯವಿಲ್ಲ. ನೀವು ಕಾಫಿ ಪ್ರಿಯರಾಗಿದ್ದರೆ ಸಾಕು ಬಿಡಿ. ಹೇಗಿದ್ದರೂ ಕಾಫಿ ಕುಡಿಯದ ವ್ಯಕ್ತಿಗಳು ಬಹಳ ಕಡಿಮೆ ಅಂತಾನೆ ಹೇಳಬಹುದು. ಹಾಗಾಗಿ ಎಲ್ಲರ ಮನೆಯಲ್ಲೂ ಕಾಫಿ ಪ್ಯಾಕ್ ಖಂಡಿತ ಲಭ್ಯ. ಒಂದು ವೇಳೆ ನೀವು ಬಹಳ ದಿನದಿಂದ ಮನೆಯಲ್ಲೇ ಉಳಿದಿರುವ ಅಥವಾ ಅವಧಿ ಮುಗಿದಿರುವ ಕಾಫಿ ಪುಡಿಯನ್ನು ಎಸೆಯದೆ ಮನೆಯಲ್ಲೇ ಇಟ್ಟುಕೊಂಡಿದ್ದರೆ ಅದನ್ನು ಮನೆಯನ್ನು ಸ್ವಚ್ಛಗೊಳಿಸಲು ಬಳಸಬಹುದಾಗಿದ್ದು, ಹೇಗೆ ಉಪಯೋಗಿಸಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಕರಕಲು ಪಾತ್ರೆಗಳನ್ನು ಸ್ವಚ್ಛಗೊಳಿಸಲು
ಎಲ್ಲರ ಮನೆಯಲ್ಲೂ ಒಮ್ಮೆಯಾದರೂ ಆಹಾರ ಪದಾರ್ಥಗಳನ್ನು ಬೇಯಿಸುವಾಗ ಪಾತ್ರೆಗಳು ತಳ ಹಿಡಿಯುವುದು ಸಾಮಾನ್ಯ. ಆದರೆ ಈ ಟ್ರಿಕ್ಸ್ ಉಪಯೋಗಿಸುವುದರಿಂದ ನೀವು ಅವುಗಳನ್ನು ಖಂಡಿತವಾಗಿಯೂ ಸ್ವಚ್ಛಗೊಳಿಸಬಹುದು. ಕಾಫಿ ಪುಡಿಯ ಸಹಾಯದಿಂದ ಕಲೆಯಾಗಿರುವ ಭಾಗ ಉಜ್ಜಿ. ಕಾಫಿಯಲ್ಲಿರುವ ಕೆಲವೊಂದು ಅಂಶಗಳು ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ.
ಫ್ರಿಜ್‌ನಿಂದ ಕೆಟ್ಟ ವಾಸನೆ ನಿವಾರಣೆ
ನಿಮ್ಮಲ್ಲಿ ಕಾಫಿ ಪುಡಿ ಉಳಿದಿದ್ದರೆ ಅದನ್ನು ಎಸೆಯಬೇಡಿ. ಮತ್ತೆ ಕುದಿಸಿ ಆ ನೀರಿನೊಂದಿಗೆ ಫ್ರಿಡ್ಜ್‌ನಲ್ಲಿಡಿ. ಇದಾದ ನಂತರ ಫ್ರಿಡ್ಜ್ ನಿಂದ ಬರುವ ಕೆಟ್ಟ ವಾಸನೆಯೂ ಹೋಗುವುದನ್ನು ನೀವು ಗಮನಿಸಬಹುದು. ಕಾಫಿಯ ಸುವಾಸನೆಯು ಫ್ರಿಡ್ಜ್‌ನ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ ಮತ್ತು ಕಾಫಿಯ ಘಮ ಮಾತ್ರ ಉಳಿಯುತ್ತದೆ.
ತಾಮ್ರದ ಪಾತ್ರೆಗಳನ್ನು ತೊಳೆಯಲು
ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀವು ಕಾಫಿ ಪುಡಿಯನ್ನು ಬಳಸಬಹುದು. ಇದರಿಂದ ನಿಮ್ಮ ಎಲ್ಲಾ ತಾಮ್ರದ ಪಾತ್ರೆಗಳು ಹೊಳೆಯಲು ಪ್ರಾರಂಭಿಸುತ್ತವೆ.
Also Read: ಈ ಹಸಿರು ಎಲೆಗಳು ಸೊಳ್ಳೆಗಳಿಂದ ರಕ್ಷಣೆ ನೀಡುವುದಲ್ಲದೆ ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ
ಗೊಬ್ಬರವಾಗಿ ಬಳಸಿ
ಸಸ್ಯಗಳಿಗೆ ಒಳ್ಳೆಯ ಗೊಬ್ಬರ ಬೇಕು ಎನ್ನುವವರು ಕಾಫಿ ಪುಡಿಯನ್ನು ಗೊಬ್ಬರವಾಗಿ ಬಳಸಬಹುದು. ಇದು ಸಸ್ಯಗಳಿಗೆ ಸಾವಯವ ಗೊಬ್ಬರವಾಗಿ ಕೆಲಸ ಮಾಡುತ್ತದೆ ಮತ್ತು ಪೋಷಣೆಯನ್ನು ಸಹ ನೀಡುತ್ತದೆ.
ಕೀಟಗಳನ್ನು ನಿವಾರಿಸಲು
ನಿಮ್ಮ ಅಡುಗೆಮನೆಯಲ್ಲಿ ಕೀಟಗಳು ಮತ್ತು ನೊಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ನೀವು ಕಾಫಿ ಪುಡಿಯನ್ನು ನೀರಿನಲ್ಲಿ ಕರಗಿಸಿ ಅಡುಗೆಮನೆಯಲ್ಲಿ ಇಡಬಹುದು. ಕೆಲವು ಕೀಟಗಳು ಕಾಫಿಯ ವಾಸನೆಯನ್ನು ಇಷ್ಟಪಡುವುದಿಲ್ಲ. ಇದರಿಂದಾಗಿ ಅಡುಗೆಮನೆಯಲ್ಲಿ ಕೀಟಗಳು ಕಾಣಿಸಿಕೊಳ್ಳುವುದಿಲ್ಲ.