ನಿತಿ ಗ್ರಾಮವು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ದ್ರೋಣಗಿರಿ ಪರ್ವತವಿದೆ. ಈ ಪರ್ವತದ ಇತಿಹಾಸವು ರಾಮಾಯಣ ಕಾಲಕ್ಕೆ ಸಂಬಂಧಿಸಿದೆ. ಶ್ರೀರಾಮ ಮತ್ತು ರಾವಣನ ನಡುವಿನ ಯುದ್ಧದಲ್ಲಿ ಮೇಘನಾದನ ದಿವ್ಯ ಆಯುಧದಿಂದ ಲಕ್ಷ್ಮಣನು ಪ್ರಜ್ಞಾಹೀನನಾಗಿದ್ದನು ಎಂದು ನಂಬಲಾಗಿದೆ. ನಂತರ ಹನುಮಂತನು ಸಂಜೀವಿನಿ ಮೂಲಿಕೆ ಸಂಗ್ರಹಿಸಲು ದ್ರೋಣಗಿರಿ ಪರ್ವತಕ್ಕೆ ಬಂದನು. ಇಲ್ಲಿನ ಜನರು ಈ ಪರ್ವತವನ್ನು ದೇವತೆಯಾಗಿ ಪರಿಗಣಿಸುತ್ತಾರೆ. ಆದರೆ ಹನುಮಂತ ದೇವರು ಈ ಪರ್ವತದ ಒಂದು ಭಾಗವನ್ನು ತೆಗೆದುಕೊಂಡು ಹೋಗಿದ್ದರಿಂದ ಗ್ರಾಮದ ಜನರು ಹನುಮಂತ ದೇವರನ್ನು ಪೂಜಿಸುವುದಿಲ್ಲ.
ಸಂಜೀವನಿ ಬೂಟಿ (ಮಾಂತ್ರಿಕ ಮೂಲಿಕೆ) ಗುರುತಿಸಲು ಹನುಮಂತನಿಗೆ ಸಾಧ್ಯವಾಗಲಿಲ್ಲ. ನಂತರ ದ್ರೋಣಗಿರಿ ಪರ್ವತದ ಒಂದು ಭಾಗವನ್ನು ಕಿತ್ತು ಲಂಕೆಗೆ ತೆಗೆದುಕೊಂಡು ಹೋದನು. ಈ ಪರ್ವತವು ಬದರಿನಾಥ ಧಾಮದಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಇಂದಿಗೂ ದ್ರೋಣಗಿರಿ ಪರ್ವತದ ಮೇಲಿನ ಭಾಗ ಕಡಿದಂತಿದೆ ಎನ್ನುತ್ತಾರೆ ಬದರಿನಾಥ ಧಾಮದ ಧಾರ್ಮಿಕ ಮುಖಂಡ ಭುವನಚಂದ್ರ ಉನಿಯಾಲ್. ನಾವು ಈ ಭಾಗವನ್ನು ಇಂದಿಗೂ ಸುಲಭವಾಗಿ ನೋಡಬಹುದು.
ಚಳಿಗಾಲದಲ್ಲಿ ಖಾಲಿಯಾಗುತ್ತದೆ ಗ್ರಾಮ
ದ್ರೋಣಗಿರಿ ಪರ್ವತದ ಎತ್ತರ 7,066 ಮೀಟರ್. ಚಳಿಗಾಲದಲ್ಲಿ ಇಲ್ಲಿ ಭಾರೀ ಹಿಮಪಾತವಾಗುತ್ತದೆ. ಇದರಿಂದ ಗ್ರಾಮದ ಜನರು ಇಲ್ಲಿಂದ ಬೇರೆಡೆ ವಾಸಿಸಲು ತೆರಳುತ್ತಾರೆ. ಬೇಸಿಗೆಯಲ್ಲಿ, ಇಲ್ಲಿನ ಹವಾಮಾನವು ವಾಸಯೋಗ್ಯವಾದಾಗ ಹಳ್ಳಿಯ ಜನರು ಇಲ್ಲಿ ವಾಸಿಸಲು ಹಿಂತಿರುಗುತ್ತಾರೆ.
ಚಾರಣಕ್ಕೆ ಹೇಳಿ ಮಾಡಿಸಿದ ತಾಣ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಜೋಶಿಮಠದಿಂದ ಮಲಾರಿ ಕಡೆಗೆ ಸುಮಾರು 50 ಕಿಲೋಮೀಟರ್ ಸಾಗಿದ ನಂತರ ಜುಮ್ಮಾ ಎಂಬ ಸ್ಥಳ ಬರುತ್ತದೆ. ದ್ರೋಣಗಿರಿ ಗ್ರಾಮಕ್ಕೆ ವಾಕಿಂಗ್ ಮಾರ್ಗ ಇಲ್ಲಿಂದ ಪ್ರಾರಂಭವಾಗುತ್ತದೆ. ಇಲ್ಲಿ, ಧೌಲಿ ಗಂಗಾ ನದಿಯ ಮೇಲೆ ನಿರ್ಮಿಸಲಾದ ಸೇತುವೆಯ ಇನ್ನೊಂದು ಬದಿಯಲ್ಲಿ ಗೋಚರಿಸುವ ನೇರ ಪರ್ವತಗಳ ಸರಣಿಯನ್ನು ದಾಟಿದ ನಂತರ ದ್ರೋಣಗಿರಿ ಪರ್ವತ ತಲುಪಬಹುದು. ಸುಮಾರು ಹತ್ತು ಕಿಲೋಮೀಟರ್‌ಗಳ ಈ ವಾಕಿಂಗ್ ಮಾರ್ಗವು ಕಿರಿದಾದ ಪರ್ವತದ ಹಾದಿಗಳೊಂದಿಗೆ ತುಂಬಾ ಕಷ್ಟಕರವಾಗಿದೆ. ಟ್ರೆಕ್ಕಿಂಗ್ ಇಷ್ಟಪಡುವ ಅನೇಕ ಜನರು ಇಲ್ಲಿಗೆ ಬರುತ್ತಾರೆ.
ಜೂನ್‌ನಲ್ಲಿ ನಡೆಯುತ್ತದೆ ದ್ರೋಣಗಿರಿ ಪರ್ವತದ ಆರಾಧನೆ
ಪ್ರತಿ ವರ್ಷ ಜೂನ್ ನಲ್ಲಿ ಗ್ರಾಮದ ಜನರು ದ್ರೋಣಗಿರಿ ಪರ್ವತಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯಲ್ಲಿ ಪಾಲ್ಗೊಳ್ಳಲು ಗ್ರಾಮದ ಜನರೊಂದಿಗೆ ಹೊರ ರಾಜ್ಯಗಳಿಂದ ತೆರಳಿದವರೂ ಬರುತ್ತಾರೆ.