ಪ್ರಪಂಚದಾದ್ಯಂತ ಬೆಳ್ಳಿಯಿಂದ ವಜ್ರದವರೆಗೆ ನೀವು ಅನೇಕ ರೀತಿಯ ಆಭರಣಗಳನ್ನು ನೋಡಿರಬಹುದು. ಆದರೆ ನಾವಿಂದು ಹೇಳುತ್ತಿರುವ ಆಭರಣ ಬಹಳ ವಿಶೇಷವಾಗಿದೆ. ಎದೆ ಹಾಲಿನ ಬಗ್ಗೆ ನಿಮಗೆ ಬಹಳ ಚೆನ್ನಾಗಿ ಗೊತ್ತು. ಈ ಹಾಲನ್ನು ಜೀವಾಮೃತ ಎಂದೇ ಹೇಳಬಹುದು. ಆದರೆ ಎದೆ ಹಾಲಿನ ಆಭರಣಗಳ ಬಗ್ಗೆ ನಿಮಗೆ ಗೊತ್ತಾ?. ಹೌದು, ಈ ಆಭರಣವು ತಾಯಿ ಮತ್ತು ಮಗುವಿನ ನಡುವಿನ ಅಮೂಲ್ಯ ಬಂಧವನ್ನು ಬಲಪಡಿಸುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ, ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ…
ಎದೆ ಹಾಲಿನ ಆಭರಣ ಎಂದರೇನು?
ಎದೆ ಹಾಲಿನ ಆಭರಣಗಳು ವಿಶೇಷ ರೀತಿಯ ಆಭರಣವಾಗಿದ್ದು, ಇದನ್ನು ತಾಯಿಯ ಎದೆ ಹಾಲಿನಿಂದ ತಯಾರಿಸಲಾಗುತ್ತದೆ. ಈ ಆಭರಣವನ್ನು ವಿಶೇಷವಾಗಿ ಪೆಂಡೆಂಟ್ಗಳು, ಉಂಗುರಗಳು, ಕಡಗಗಳು ಮತ್ತು ಕಿವಿಯೋಲೆಗಳ ರೂಪದಲ್ಲಿ ತಯಾರಿಸಲಾಗುತ್ತದೆ.
ಆಭರಣವನ್ನು ಹೇಗೆ ತಯಾರಿಸುತ್ತಾರೆ?
ಮೊದಲನೆಯದಾಗಿ ತಾಯಿಯು ತನ್ನ ಎದೆಹಾಲನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸುತ್ತಾಳೆ. ಸಾಮಾನ್ಯವಾಗಿ 5 ರಿಂದ 10 ಮಿಲಿಲೀಟರ್ (ಎಂಎಲ್) ಇರುವ ಈ ಹಾಲನ್ನು ಮುಚ್ಚಿದ ಪಾತ್ರೆಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಹಾಲನ್ನು ಸಂರಕ್ಷಿಸಲು ವಿಶೇಷ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ಹಾಲನ್ನು ಒಣಗಿಸಿ ಪುಡಿಯಾಗಿ ಪರಿವರ್ತಿಸಲಾಗುತ್ತದೆ ಅಥವಾ ಅದನ್ನು ರಾಳದೊಂದಿಗೆ ಬೆರೆಸಲಾಗುತ್ತದೆ. ಈ ಪ್ರಕ್ರಿಯೆಯು ಹಾಲು ದೀರ್ಘಕಾಲದವರೆಗೆ ತಾಜಾ ಮತ್ತು ಸ್ಥಿರವಾಗಿರುತ್ತದೆ ಎಂದು ಖಚಿತಪಡಿಸುತ್ತದೆ.
ತಾಯಿಯ ಹಾಲನ್ನು ರಾಳದೊಂದಿಗೆ ಬೆರೆಸಿ ಗಟ್ಟಿಯಾದ ವಸ್ತುವಾಗಿ ಪರಿವರ್ತಿಸಿದ ನಂತರ ಪಾಲಿಶ್ ಮಾಡಲಾಗುತ್ತದೆ. ಇದನ್ನು ಮಣಿಗಳು, ಸ್ಟೋನ್ಸ್ ಅಥವಾ ಇತರ ಆಕಾರಗಳಾಗಿ ರೂಪಿಸಬಹುದು. ಅಪೇಕ್ಷಿತ ಆಕಾರದಲ್ಲಿ ಅಚ್ಚನ್ನೂ ಮಾಡಲಾಗುತ್ತದೆ. ಇದನ್ನು ಕಂಕಣ, ಉಂಗುರ, ಪೆಂಡೆಂಟ್ ಅಥವಾ ಕಿವಿಯೋಲೆಗಳಂತೆ ವಿನ್ಯಾಸಗೊಳಿಸಬಹುದು. ಈ ಪ್ರಕ್ರಿಯೆ ಮುಗಿದ ಮೇಲೆ ಸಿದ್ಧಪಡಿಸಿದ ಆಭರಣವನ್ನು ಆಭರಣದ ಸೆಟ್ಟಿಂಗ್ಗೆ ಅಳವಡಿಸಲಾಗುತ್ತದೆ.
ಎದೆ ಹಾಲಿನ ಆಭರಣಗಳ ಪ್ರಯೋಜನಗಳು
ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಬಲಪಡಿಸುತ್ತದೆ
ಎದೆ ಹಾಲಿನಿಂದ ಮಾಡಿದ ಆಭರಣಗಳು ತಾಯಿ ಮತ್ತು ಮಗುವಿನ ನಡುವಿನ ಆಳವಾದ ಬಂಧವನ್ನು ಪ್ರತಿಬಿಂಬಿಸುತ್ತದೆ. ತಾಯಿ ತನ್ನ ಮಗುವಿಗೆ ಹಾಲುಣಿಸಿದ ಆ ಸ್ಮರಣೀಯ ಕ್ಷಣಗಳನ್ನು ಈ ಆಭರಣವು ನೆನಪಿಸುತ್ತದೆ. ಹೀಗೆ ತಾಯಿ ಯಾವಾಗಲೂ ತನ್ನ ಮಗುವಿಗೆ ಹತ್ತಿರವಾಗುತ್ತಾಳೆ.
ಸ್ತನ್ಯಪಾನದ ಅನುಭವದ ನೆನಪು
ಈ ಆಭರಣವು ಸ್ತನ್ಯಪಾನದ ಅನುಭವವನ್ನು ಸ್ಮರಿಸಬಲ್ಲ ಆಜೀವ ಸ್ಮರಣಿಕೆಯಾಗಿದೆ. ತಾಯಿ ಮತ್ತು ಮಗುವಿನ ನಡುವಿನ ಸಂಬಂಧವು ಆಳವಾಗಿದ್ದು, ಒಟ್ಟಾರೆ ಆ ಅಮೂಲ್ಯ ಸಮಯವನ್ನು ಆಭರಣವು ಸಂಕೇತಿಸುತ್ತದೆ.
ಭಾವನಾತ್ಮಕ ಸಂಕೇತ
ಎದೆ ಹಾಲಿನ ಆಭರಣಗಳನ್ನು ಧರಿಸುವುದು ಭಾವನಾತ್ಮಕ ಸಂಕೇತವಾಗಿದೆ, ಇದು ಅವರ ಮಾತೃತ್ವದ ಪ್ರಮುಖ ಭಾಗವನ್ನು ಪ್ರತಿನಿಧಿಸುತ್ತದೆ.
ವಿಶಿಷ್ಟ ಮತ್ತು ವೈಯಕ್ತಿಕ
ಎದೆ ಹಾಲಿನಿಂದ ಮಾಡಿದ ಆಭರಣಗಳು ಸಂಪೂರ್ಣವಾಗಿ ವೈಯಕ್ತಿಕವಾಗಿರುತ್ತದೆ. ಇದು ಒಂದು ವಿಶಿಷ್ಟವಾದ ಮತ್ತು ವಿಭಿನ್ನ ರೀತಿಯ ಆಭರಣವಾಗಿದ್ದು, ಇದು ಬೇರೆ ಯಾವುದೇ ಆಭರಣಗಳೊಂದಿಗೆ ಹೋಲಿಕೆ ಬರುವುದಿಲ್ಲ.
ಸುಂದರವಾದ ನೆನಪು
ಈ ಆಭರಣವು ತಾಯಿ ಮತ್ತು ಮಗುವಿನ ನಡುವಿನ ಪ್ರೀತಿಯನ್ನು ಸಂಕೇತಿಸುತ್ತದೆ. ಇದರ ಮೂಲಕ, ತಾಯಿಯು ತನ್ನ ಮಗುವಿನ ಮೊದಲ ಕೆಲವು ತಿಂಗಳುಗಳು ಅಥವಾ ವರ್ಷಗಳ ಸುಂದರ ನೆನಪುಗಳನ್ನು ಯಾವಾಗಲೂ ತನ್ನೊಂದಿಗೆ ಇಟ್ಟುಕೊಳ್ಳಬಹುದು.
ಆಭರಣ ಆರೈಕೆ ಮಾಡುವುದು ಹೇಗೆ?
– ಎದೆ ಹಾಲಿನ ಆಭರಣಗಳನ್ನು ಸೂರ್ಯನ ಬೆಳಕು ಅಥವಾ ಅತಿಯಾದ ಶಾಖದಿಂದ ದೂರವಿಡಿ, ಏಕೆಂದರೆ ಇದು ರಾಳವನ್ನು ಹಾನಿಗೊಳಿಸುತ್ತದೆ.
– ಆಭರಣಗಳನ್ನು ನೀರು ಅಥವಾ ತೇವಾಂಶದಿಂದ ದೂರವಿಡಿ, ಇದರಿಂದ ಅವು ದೀರ್ಘಕಾಲದವರೆಗೆ ಪರಿಪೂರ್ಣ ಸ್ಥಿತಿಯಲ್ಲಿ ಉಳಿಯುತ್ತವೆ.
– ಆಭರಣದ ಮೇಲ್ಮೈಯನ್ನು ಸ್ವಚ್ಛಗೊಳಿಸಲು ಮೃದುವಾದ ಬಟ್ಟೆಯನ್ನು ಬಳಸಿ, ಇದರಿಂದ ಅವುಗಳ ಹೊಳಪನ್ನು ಕಾಪಾಡಿಕೊಳ್ಳಬಹುದು.
Read Also: ಮರದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಕೂದಲು ಉದರಲ್ಲ, ತಲೆನೋವು ಬರಲ್ಲ…ಮತ್ತೇನೆಲ್ಲಾ ಪ್ರಯೋಜನಗಳಿವೆ?
ಕೇವಲ ಅಲಂಕಾರಿಕ ವಸ್ತುವಲ್ಲ…
ಎದೆಹಾಲಿನಿಂದ ಮಾಡಿದ ಆಭರಣಗಳು ಕೇವಲ ಅಲಂಕಾರಿಕ ವಸ್ತುವಲ್ಲ. ತಾಯಿ ಮತ್ತು ಮಗುವಿನ ನಡುವಿನ ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ಇದು ಭಾವನಾತ್ಮಕ ಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗವಾಗಿದೆ. ತಾಯಿಯು ಅದನ್ನು ಧರಿಸಿದಾಗ, ಅವಳು ತನ್ನ ಮಗುವನ್ನು ಪೋಷಿಸಿದ ಆ ವಿಶೇಷ ಕ್ಷಣಗಳನ್ನು ನೆನಪಿಸುತ್ತದೆ ಮತ್ತು ಇದು ಸಂಬಂಧವನ್ನು ಗಾಢಗೊಳಿಸುತ್ತದೆ. ಈ ಆಭರಣವು ಹಾಲುಣಿಸುವ ಸಮಯದಲ್ಲಿ ತಾಯಿ ಮತ್ತು ಮಗುವಿನ ನಡುವೆ ಬೆಳೆಯುವ ಆಳವಾದ ಸಂಬಂಧ ಮತ್ತು ಪ್ರೀತಿಯನ್ನು ಸಂಕೇತಿಸುತ್ತದೆ. ಇದನ್ನು ಧರಿಸುವುದರಿಂದ, ತಾಯಿ ಯಾವಾಗಲೂ ತನ್ನೊಂದಿಗೆ ಆ ಅಮೂಲ್ಯ ಸಮಯವನ್ನು ನೆನಪಿಡಬಹುದು.