ಬೆಳಗ್ಗೆ ಎದ್ದರೆ ರಾತ್ರಿ ಮಲಗುವ ತನಕ ಪ್ರತಿ ಮನೆಯಲ್ಲೂ ಕಸ ಬಿದ್ದೇ ಬೀಳುತ್ತದೆ. ಇನ್ನೂ ಸಿಂಪಲ್ಲಾಗಿ ಹೇಳುವುದಾದರೆ ಮನುಷ್ಯ ಎಲ್ಲಿ ಇರುತ್ತಾನೋ ಅಲ್ಲಿ ಕಸದ ರಾಶಿ ಉತ್ಪತ್ತಿಯಾಗುತ್ತಲೇ ಇರುತ್ತದೆ. ಆದರೆ ಅದೇ ಕಸ ಮಾರಾಟ ಮಾಡಿ ಮಹಿಳೆಯೊಬ್ಬರು ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿರುವ ವಿಚಾರ ಗೊತ್ತಾ?, ಹೌದು, ನಾವಿಂದು ನಿಮಗೆ ಹೇಳಲು ಹೊರಟಿರುವುದು ಕಸ ಮಾರಾಟ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸಿದ ಮಹಿಳೆಯ ಬಗ್ಗೆ. ಅಂದಹಾಗೆ ಈ ಮಹಿಳೆ ಕಸದಿಂದ ಲಕ್ಷ ಲಕ್ಷ ಸಂಪಾದಿಸಿದ್ದು ಹೇಗೆ ಗೊತ್ತಾ?.
ಇತ್ತೀಚಿನ ದಿನಗಳಲ್ಲಿ ಕಸವು ಪ್ರಪಂಚದಾದ್ಯಂತ ಜಾಗತಿಕ ಸಮಸ್ಯೆಯಾಗಿದೆ. ಇದನ್ನು ಎದುರಿಸಲು ಪ್ರತಿಯೊಂದು ದೇಶವೂ ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ ನಿಮ್ಮ ಮನೆಯಿಂದ ಯಾವ ಕಸ ಬಿಸಾಡಿದರೂ ಅದು ಲಕ್ಷ ರೂಪಾಯಿಗಳಾಗಬಹುದೆಂದು ನೀವು ಎಂದಾದರೂ ಯೋಚಿಸಿದ್ದೀರಾ. ಹೌದು, ಅಮೆರಿಕದ ಟೆಕ್ಸಾಸ್ನಲ್ಲಿ ನೆಲೆಸಿರುವ ಮಹಿಳೆಯೊಬ್ಬರಿಗೆ ಹೊಳೆದ ಆಲೋಚನೆಯಿಂದ ಕಸ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾರೆ.
ಮಾಹಿತಿ ಪ್ರಕಾರ, 34 ವರ್ಷದ ಟಿಫನಿ ಬಟ್ಲರ್ ಕಸ ಮಾರಾಟ ಮಾಡಿ ಲಕ್ಷಗಟ್ಟಲೆ ಆದಾಯ ಪಡೆಯುತ್ತಿದ್ದು, ಕೊನೆಗೆ ಈ ಕೆಲಸವನ್ನೇ ತನ್ನ ವೃತ್ತಿಯನ್ನಾಗಿ ಪರಿಗಣಿಸಿ 66 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸಿದ್ದಾರೆ.
ಕಸದಿಂದ ಹಣ ಗಳಿಸಿದ್ದು ಹೇಗೆ?
ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಟು ನೇರವಾಗಿ ಕಸದ ತೊಟ್ಟಿ ಬಳಿ ಹೋಗುತ್ತೇನೆ ಎಂದು ಟಿಫನಿ ಹೇಳಿದ್ದಾರೆ. ಕಸದ ರಾಶಿಯಿಂದ ಮಾರಾಟ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಿ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಾರೆ. ವಾರದಲ್ಲಿ ಕನಿಷ್ಠ 2ರಿಂದ 3 ದಿನ ಕಸ ಸಂಗ್ರಹಿಸಿ ಮಾರಾಟ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಪ್ರಕ್ರಿಯೆಯನ್ನು ‘ಡಂಪ್ಸ್ಟರ್ ಡೈವಿಂಗ್’ (Dumpster diving) ಎಂದು ಕರೆಯಲಾಗುತ್ತದೆ.
ಕಸದಲ್ಲಿ ಬಿಸಾಡಿರುವ ವಸ್ತುಗಳೆಲ್ಲ ಹೊಚ್ಚಹೊಸದು
ಟಿಫನಿ ‘ಡಂಪ್ಸ್ಟರ್ಡಿವಿಂಗ್ಮಾಮ್’ (Dumpster-Diving Mom) ಹೆಸರಿನ ಟಿಕ್ಟಾಕ್ ಖಾತೆ ಹೊಂದಿದ್ದಾರೆ. ಇದರಲ್ಲಿ ಆಕೆ ಕಸದಲ್ಲಿ ವಸ್ತುಗಳನ್ನು ಹುಡುಕುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚಿನ ವಿಡಿಯೋವೊಂದರಲ್ಲಿ ಟಿಫನಿ 9 ಹೊಸ ಬ್ಯಾಲೆನ್ಸ್ ಸ್ನೀಕರ್ಸ್, ನೀರಿನ ಬಾಟಲಿಗಳು, ಟಿ-ಶರ್ಟ್ಗಳು ಮತ್ತು ಸಾಕ್ಸ್ಗಳನ್ನು ಕಸದಲ್ಲಿ ಸಿಕ್ಕಿರುವುದಾಗಿ ತೋರಿಸಿದರು. ಕಸದಲ್ಲಿ ಬಿಸಾಡಿರುವ ವಸ್ತುಗಳೆಲ್ಲ ಹೊಚ್ಚಹೊಸವಾಗಿದ್ದು, ಬೆಲೆ ಪಟ್ಟಿ ಲಗತ್ತಿಸಲಾಗಿದೆ. ಅಂಗಡಿಯ ಮಾಲೀಕರು ಆಗಾಗ್ಗೆ ಹೊಸ ಮತ್ತು ಬೆಲೆಬಾಳುವ ವಸ್ತುಗಳನ್ನು ಕಸದಲ್ಲಿ ಎಸೆಯುತ್ತಾರೆ. ಇದನ್ನು ಸಂಗ್ರಹಿಸಿ ಮಾರಾಟ ಮಾಡುವುದಾಗಿಯೂ ಟಿಫನಿ ಹೇಳಿದ್ದಾರೆ.
ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲಿ ಡಂಪ್ಸ್ಟರ್ ಡೈವಿಂಗ್ ಕಾನೂನುಬದ್ಧವಾಗಿದೆ. ಆದರೆ ನೀವು ಖಾಸಗಿ ಆಸ್ತಿಯನ್ನು ಅತಿಕ್ರಮಿಸಿದರೆ ಅಥವಾ ಕಸದ ತೊಟ್ಟಿಯ ಬೀಗವನ್ನು ಮುರಿದರೆ ಮಾತ್ರ ಅದು ಕಾನೂನುಬಾಹಿರವಾಗಬಹುದು.