Aditi Rao Hydari: ಬಾಲಿವುಡ್ನ ಸುಂದರ ನಟಿ ಅದಿತಿ ರಾವ್ ಹೈದರಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದಿತಿ ಸಿದ್ಧಾರ್ಥ್ ಅವರನ್ನು ಮದುವೆಯಾಗಲು ನಿರ್ಧರಿಸಿರುವುದು ಹಳೆಯ ವಿಚಾರ. ಕಳೆದ ವರ್ಷ ಮಾರ್ಚ್ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಇದೀಗ ಮದುವೆ ಸಿದ್ಧತೆಗಳು ಭರದಿಂದ ಸಾಗಿವೆ. ಅದಿತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇದನ್ನು ಕನ್ಫರ್ಮ್ ಮಾಡಿದ್ದಾರೆ. ಹೊಸ ವಿಚಾರವೆಂದರೆ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿರುವುದು.
ಹೌದು, ಈ ಸುದ್ದಿ ಕೇಳಿದ ನಂತರ ಎಲ್ಲರೂ ಅವರ ಮದುವೆಯ ಸ್ಥಳವನ್ನು ತಿಳಿಯಲು ಕಾತುರರಾಗಿದ್ದಾರೆ. ವಿಶೇಷವೆಂದರೆ ಸೆಲೆಬ್ರಿಟಿಗಳಂತೆ ಈ ಜೋಡಿಯೂ ಡೆಸ್ಟಿನೇಷನ್ ವೆಡ್ಡಿಂಗ್ ಗೊತ್ತು ಮಾಡಿಲ್ಲ, ಬದಲಿಗೆ ಅದಿತಿ ರಾವ್ ಅವರ ಕುಟುಂಬಕ್ಕೆ ಸಂಬಂಧಿಸಿದ 400 ವರ್ಷಗಳಷ್ಟು ಹಳೆಯದಾದ ದೇವಸ್ಥಾನದಲ್ಲಿ ಮದುವೆಯಾಗಲಿದ್ದಾರೆ. ಹಾಗಾದರೆ ಅದಿತಿ ಮತ್ತು ಸಿದ್ಧಾರ್ಥ್ ಯಾವ ದೇವಸ್ಥಾನದಲ್ಲಿ ಮದುವೆಯಾಗಲಿದ್ದಾರೆ ಮತ್ತು ಆ ದೇವಸ್ಥಾನ ಏಕೆ ತುಂಬಾ ವಿಶೇಷವಾಗಿದೆ ಎಂದು ತಿಳಿಯೋಣ ಬನ್ನಿ…
ಸಾಂಪ್ರದಾಯಿಕ ವಿವಾಹ
ಅದಿತಿ ರಾವ್ ಮತ್ತು ಸಿದ್ಧಾರ್ಥ್ ತಮ್ಮ ಮದುವೆಯನ್ನು ಅತ್ಯಂತ ವೈಯಕ್ತಿಕ ಮತ್ತು ಸಾಂಪ್ರದಾಯಿಕ ಸಮಾರಂಭವನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣದ ವನಪರ್ತಿಯಲ್ಲಿರುವ ಶ್ರೀರಂಗಪುರ ದೇವಸ್ಥಾನವನ್ನು ಮದುವೆಯ ಸ್ಥಳವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಳ್ಳುತ್ತಾರೆ. ಆದರೆ ಮದುವೆಯ ದಿನಾಂಕವನ್ನು ಇನ್ನೂ ರಿವೀಲ್ ಮಾಡಿಲ್ಲ. ದಂಪತಿಗಳ ಮದುವೆಯ ದಿನಾಂಕ ತಿಳಿಯಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.
ಶ್ರೀರಂಗಪುರ ದೇವಾಲಯದ ಮಹತ್ವ
ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರದ ಪುರಾತನ ದೇವಾಲಯವು (Sri Ranganayaka Swamy Temple) ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಇತಿಹಾಸ ಸುಮಾರು 400 ವರ್ಷಗಳಷ್ಟು ಹಳೆಯದು. ದೇವಾಲಯದ ಶಾಂತ ಮತ್ತು ಆಕರ್ಷಕ ವಾತಾವರಣವು ಭಕ್ತರಿಗೆ ತುಂಬಾ ಇಷ್ಟವಾಗುತ್ತದೆ. ವಾಸ್ತವವಾಗಿ ಇಲ್ಲಿನ ಸ್ಥಳೀಯ ಜನರಿಗೆ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಪ್ರತಿ ವರ್ಷ ನೂರಾರು ವಿವಾಹಗಳು ಮತ್ತು ಇತರ ಧಾರ್ಮಿಕ ಆಚರಣೆಗಳು ನಡೆಯುತ್ತವೆ ಎಂದು ನಂಬಲಾಗಿದೆ. ಈ ದೇವಸ್ಥಾನದಲ್ಲಿ ಮದುವೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ದೂರದೂರುಗಳಿಂದ ಜೋಡಿಗಳು ಇಲ್ಲಿಗೆ ಮದುವೆಯಾಗಲು ಬರುತ್ತಾರೆ.