ರಾಜಸ್ಥಾನದ ಚಿಕ್ಕ ಹಳ್ಳಿ ಚಿತ್ತೋರ್‌ಘಢ. ಇದೇ ಹಳ್ಳಿಯಲ್ಲಿಯೇ ನಯೆರಾ ಅಹುಜಾ ಜನಿಸಿದ್ದು. ಇವರ ತಂದೆ ಕುಟುಂಬವನ್ನು ಪೋಷಿಸಲು ದ್ವಿಚಕ್ರ ವಾಹನದಲ್ಲಿ ತಂಬಾಕು ಮತ್ತು ಸಿಗರೇಟ್ ಚೀಲಗಳನ್ನು ಹಾಕಿಕೊಂಡು ಮಾರಾಟ ಮಾಡುತ್ತಿದ್ದರು. 65ನೇ ವಯಸ್ಸಿನವರೆಗೂ ಅವರು ಇದೇ ರೀತಿ ಕಷ್ಟಪಟ್ಟು ಮಕ್ಕಳನ್ನು ಸಾಕಿದರು. ನಯೆರಾ ಇಂತಹ ಕಷ್ಟಗಳ ನಡುವೆಯೇ ಓದಿದರು. ಮುಂಬೈನಲ್ಲಿ ಕಾಲ್ ಸೆಂಟರ್ ನಲ್ಲಿ ಸಹ ಕೆಲಸ ಮಾಡಿದರು. ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರಾದರೂ ಪದೇ ಪದೇ ಸೋಲಿನಿಂದ ಹಲವಾರು ಬಾರಿ ಆತ್ಮಹ*ತ್ಯೆಗೆ ಪ್ರಯತ್ನಿಸಿದರು. ಆದರೆ ಈಗ ಅವರು ಜನಪ್ರಿಯ ಮಾಡೆಲ್. ವೆಬ್ ಸಿರೀಸ್‌ನಲ್ಲೂ ಸಹ ಕೆಲಸ ಮಾಡಿರುವ ನಯೆರಾ ಅಹುಜಾ ಹೋರಾಟದ ಕಥೆಯನ್ನು ನಾವೀಗ ತಿಳಿಯೋಣ ಬನ್ನಿ…
ಬಾಲ್ಯದಲ್ಲಿ ಕಾಣಿಸಿಕೊಂಡ ಅಜ್ಞಾತ ರೋಗ
ನಯೆರಾ ಬಾಲ್ಯದಿಂದಲೂ ಅಜ್ಞಾತ ಕಾಯಿಲೆಯಿಂದ ಬಳಲುತ್ತಿದ್ದರು. ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ಇತ್ತು. ಪದೇ ಪದೇ ಅನಾರೋಗ್ಯದಿಂದ ಕುಟುಂಬವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಏತನ್ಮಧ್ಯೆ ಎನ್‌ಜಿಒ ನೆರವಿನಿಂದ 11 ಮತ್ತು 12 ನೇ ತರಗತಿ ತೇಗರ್ಡೆಯಾದರು. ಆಗ ಮಾಡೆಲಿಂಗ್ ಆಕೆಯ ಕನಸಾಗಿತ್ತು. ಈ ಬಗ್ಗೆ ಪರಿಚಯದವರ ಬಳಿ ಮಾತನಾಡಿದಾಗ ಎಲ್ಲರೂ ಆಕೆಯ ಬಾಯಿ ಮುಚ್ಚಿಸುವವರೇ.
ಕಾಲ್ ಸೆಂಟರ್‌ನಿಂದ ಕೆಲಸ ಪ್ರಾರಂಭ
ಸಿವಿಲ್ ಇಂಜಿನಿಯರಿಂಗ್ ಮಾಡುವ ಬಯಕೆಯಿದ್ದರೂ ಅಂಕಗಳು ತೀರಾ ಕಡಿಮೆ ಇದ್ದುದರಿಂದ ಎಲ್ಲೂ ಪ್ರವೇಶ ಸಿಗಲಿಲ್ಲ. ಆಗಲೇ ನಯೆರಾ ತಾನು ಮಾಡೆಲ್ ಆಗಬೇಕೆಂದು ನಿರ್ಧರಿಸಿದರು. ಇದೇ ತನ್ನ ವೃತ್ತಿ ಎಂದು ಆಯ್ಕೆ ಮಾಡಿಕೊಂಡರು, ಅರ್ಥ ಮಾಡಿಕೊಂಡರು. ಆದರೆ ಫ್ಯಾಮಿಲಿ ಹಾಗೂ ಸಂಬಂಧಿಕರು ನಯೆರಾ ಈ ನಿರ್ಧಾರವನ್ನು ವಿರೋಧಿಸುತ್ತಲೇ ಬಂದರು. ಆದರೆ ಇದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳದೆ, ಭೋಪಾಲ್‌ನಲ್ಲಿ ಸ್ವಲ್ಪ ದಿನ ಕೆಲಸ ಮಾಡಿ, ಹಣವನ್ನು ಸಂಗ್ರಹಿಸಿ ನಂತರ ಮುಂಬೈಗೆ ತೆರಳಿದರು. ಕಾಲ್ ಸೆಂಟರ್ ನಲ್ಲಿ ಕೆಲಸ ಸಿಕ್ಕಿತು. ಆದರೆ ಅದರಿಂದ ತೃಪ್ತರಾಗಲಿಲ್ಲ, ಕೆಲಸ ಬಿಟ್ಟು ಮುಂಬೈನಲ್ಲಿ ಮಾಡೆಲಿಂಗ್ ವೃತ್ತಿ ಆರಂಭಿಸಿದರು.
ನಾಲ್ಕು ವರ್ಷ ಊಟ ಮಾಡಲಿಲ್ಲ!
ಮುಂಬೈನಂತಹ ಮಹಾನಗರಿಯಲ್ಲಿ ಜೀವನವು ಅದೆಷ್ಟು ಆಕರ್ಷಕವಾಗಿ ಕಾಣುತ್ತದೆಯೋ ಅಷ್ಟೇ ಕಷ್ಟಕರವಾಗಿರುತ್ತದೆ. ನಯೆರಾ ದೇಹವನ್ನು ಫಿಟ್ ಆಗಿಟ್ಟುಕೊಳ್ಳಬೇಕೆಂಬ ಕಾರಣಕ್ಕಾಗಿ ಮೊದಲ ನಾಲ್ಕು ವರ್ಷಗಳ ಕಾಲ ರಾತ್ರಿ ಊಟವನ್ನು ಬಿಟ್ಟರು. ಮಾಡೆಲಿಂಗ್‌ನಲ್ಲಿ ಲೀನ್ ಫಿಗರ್ ಹೊಂದಲು ಸಾಕಷ್ಟು ಒತ್ತಡವಿತ್ತು. ಹಗಲು ರಾತ್ರಿ ಎನ್ನದೆ ಟ್ರೆಡ್ ಮಿಲ್‌ನಲ್ಲಿ ಓಡಬೇಕಾಯಿತು. ಕೆಲವೊಮ್ಮೆ ಇದೆಲ್ಲಾ ಸರಿನಾ? ಅನಿಸಿತಾದರೂ ಗ್ಲಾಮರ್ ಇಂಡಸ್ಟ್ರಿಯಲ್ಲಿ ತನ್ನನ್ನು ನೋಡಿದಾಗ ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿದ್ದೇನೆ ಅನಿಸಿತಂತೆ.
Read Also: 6 ಬಾರಿ ಫೇಲ್ ಆದ ನಂತರವೂ ಧೃತಿಗೆಡಲಿಲ್ಲ…ಮಾಣಿಯೊಬ್ಬರು IAS ಅಧಿಕಾರಿಯಾದ ಯಶೋಗಾಥೆ
ತಂದೆಯ ಹೋರಾಟವೇ ಸ್ಫೂರ್ತಿ
ನಯೆರಾ ತಂದೆಯ ಹೋರಾಟದ ಜೀವನ ನೋಡಿ ಸ್ಫೂರ್ತಿ ಪಡೆದವರು. ತಂದೆ 60ರ ಹರೆಯದಲ್ಲೂ ಸಿಗರೇಟ್, ತಂಬಾಕು ಮಾರಾಟ ಮಾಡುತ್ತಿದ್ದರು. ಎರಡು ಚೀಲಗಳನ್ನು ಹೊತ್ತು ದ್ವಿಚಕ್ರ ವಾಹನದಲ್ಲಿ ಬೀದಿಗಿಳಿಯುತ್ತಿದ್ದರು. ಅವರ ಹೋರಾಟವು ನಯೆರಾಗೆ ಸ್ಫೂರ್ತಿ ನೀಡುತ್ತಲೇ ಬಂದಿತು. ಕೊನೆಗೆ ಬಾಲಿವುಡ್ ನಲ್ಲಿ ಕಲಾ ನಿರ್ದೇಶನ ಮತ್ತು ಸೃಜನಶೀಲ ಸಹಾಯಕರಾಗಿಯೂ ಕೆಲಸ ಮಾಡಿದರು. ರವೀನಾ ಟಂಡನ್ ಮತ್ತು ಸಂಜಯ್ ದತ್ ಅವರಂತಹ ದೊಡ್ಡ ತಾರೆಯರ ಜೊತೆ ಕೆಲಸ ಮಾಡುತ್ತಿದ್ದರು. ಆದರೆ ಇದರ ಹೊರತಾಗಿಯೂ ಆರ್ಥಿಕ ಸಮಸ್ಯೆ ದೂರವಾಗಲಿಲ್ಲ. ಏಕೆಂದರೆ ಆಕೆಯ ಹಣ ಎಷ್ಟೆಂದು ಚೆಕ್ ಮೇಲೆ ಬರೆಯಿತಾದರೂ, ಅದು ಖಾತೆಗೆ ಬರಲಿಲ್ಲ. ಇದರಿಂದ ಖಿನ್ನತೆಗೊಳಗಾದರು ನಯೆರಾ.
ಆತ್ಮಹ*ತ್ಯೆಗೆ ಯತ್ನ
ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡರೂ ತನಗೆ ಆರ್ಥಿಕ ಸಮಸ್ಯೆಯಾಯಿತು ಎಂದು ಹೇಳಿರುವ ನಯೆರಾ, ಅನೇಕ ಪ್ರಾಜೆಕ್ಟ್‌ಗಳನ್ನು ಮಾಡಿದರೂ ಹಣ ಬರಲಿಲ್ಲ. ಆಗ ಆಕೆಯ ಬಳಿ ಸರಿಯಾಗಿ 15 ಸಾವಿರವಿತ್ತು. ಬಾಡಿಗೆ, ಊಟಕ್ಕೆ ಹಣದ ಕೊರತೆಯಾದಾಗ ಸೋಲಿಗೆ ಹೆದರಿದ ನಯೆರಾ, ಹಲವಾರು ಬಾರಿ ಆತ್ಮಹ*ತ್ಯೆಗೆ ಪ್ರಯತ್ನಿಸಿದರು. ಆದರೆ ಅಣ್ಣ ಬೆಂಗಳೂರಿಗೆ ಕರೆಸಿ, ಇಲ್ಲಿ ವ್ಯಾಪಾರ ಆರಂಭಿಸುವಂತೆ ಸೂಚಿಸಿದರು.
ಹೆಸರು ಬದಲಾಯ್ತು, ಲಕ್ ಬಂತು
ನಯೆರಾ ಎಲ್ಲವೂ ಮುಗಿಯಿತು ಅಂದುಕೊಳ್ಳುವ ಸಮಯದಲ್ಲಿಯೇ ಹೊಸ ಆರಂಭಕ್ಕೆ ಮುನ್ನುಡಿ ಬರೆಯಲು ತನ್ನ ಹೆಸರನ್ನು ಬದಲಾಯಿಸಿಕೊಂಡರು. ಹೌದು, ನೆಯೆರಾ ಮೊದಲ ಹೆಸರು ‘ಭಾವನಾ’. ಈ ಹೆಸರಿನೊಂದಿಗೆ ಅವರ ಅದೃಷ್ಟವೂ ಬದಲಾಯಿತು. ಇದ್ದಕ್ಕಿದ್ದಂತೆ ಜನಪ್ರಿಯ ಕಾರ್ಯಕ್ರಮದ ಅಡಿಷನ್‌ಗೆ ಕರೆಬಂತು. ಆಯ್ಕೆಯಾದರು. ಅವರೇ ಹೇಳುವಂತೆ ಅವರ ಹೆಸರು, ಲುಕ್ ಅವರಿಗೆ ವರವಾಯಿತು. ಕೊನೆಗೆ Roadies, splitsvilla ಮುಂತಾದ ಅಡಿಷನ್‌ಗೆ ಕರೆ ಬಂದಿತು. ಈಗ ನಯೆರಾ ಯಶಸ್ವಿ ಮಾಡೆಲ್.