ಕಳೆದ ಕೆಲವು ವರ್ಷಗಳಿಂದ ಆಹಾರದ ಗುಣಮಟ್ಟ ಮತ್ತು ಪೋಷಣೆ (Nutrition) ಯ ಬಗ್ಗೆ ಅರಿವು ಗಮನಾರ್ಹವಾಗಿ ಹೆಚ್ಚಾಗಿದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿಯೂ ‘ಆರೋಗ್ಯಕರ ಆಹಾರ’ ಎಂದು ಟ್ಯಾಗ್ ಮಾಡಲಾದ ಪದಾರ್ಥಗಳ ಮಾರಾಟ ವೇಗವಾಗಿ ಬೆಳೆಯುತ್ತಿದೆ. ಆದರೆ ಹೆಲ್ತಿ ಫುಡ್ ಎಂದು ಹೇಳಲಾಗುವ ಪ್ರತಿಯೊಂದು ಆಹಾರ ಉತ್ಪನ್ನವು ನಿಜವಾಗಿಯೂ ಆರೋಗ್ಯಕರವೇ?, ಅದಕ್ಕೆ ತಜ್ಞರು ಕೊಡುವ ಉತ್ತರ ʼಇಲ್ಲʼ. ನಮ್ಮ ಮನೆಗಳಲ್ಲಿ ನಾವು ದಿನನಿತ್ಯ ಅಂಗಡಿಯಿಂದ ತಂದು ಬಳಸುವ ಅನೇಕ ಆಹಾರ ಉತ್ಪನ್ನಗಳು ಆರೋಗ್ಯಕರವಾಗಿ ಕಾಣಿಸಬಹುದು, ಆದರೆ ಅವುಗಳ ಗುಣಮಟ್ಟ ಮತ್ತು ಪೋಷಣೆ ನಾವು ಯೋಚಿಸಿದಷ್ಟು ಪ್ರಯೋಜನಕಾರಿಯಾಗಿರುವುದಿಲ್ಲ, ಹೇಗೆ ಅಂತೀರಾ?, ಮುಂದೆ ಓದಿ…
ಪ್ಯಾಕೇಜ್ ಮಾಡಿದ ಹಣ್ಣಿನ ರಸ
ಎಷ್ಟೋ ಬಾರಿ ನಿಶಕ್ತಿಯಾದಾಗ ಮತ್ತು ಆರೋಗ್ಯಕ್ಕಾಗಿ ನಾವು ಆಯ್ಕೆಮಾಡುವ ಪ್ಯಾಕ್ ಮಾಡಲಾದ ಹಣ್ಣಿನ ಜ್ಯೂಸ್‌ಗಳು ಹೆಚ್ಚಾಗಿ ಅಧಿಕ ಪ್ರಮಾಣದ ಸಕ್ಕರೆ ಮತ್ತು ಸಂರಕ್ಷಕಗಳಿಂದ ತುಂಬಿರುತ್ತವೆ. ಆದರೆ ಈ ಜ್ಯೂಸ್ ಅನ್ನು ಸಾಮಾನ್ಯವಾಗಿ ಫ್ರೆಶ್ ಹಣ್ಣುಗಳಿಂದ ಮಾಡಲಾಗುವುದಿಲ್ಲ. ಬದಲಿಗೆ ಹಣ್ಣಿನ ರಸ ಮತ್ತು ಇತರ ಕೃತಕ ಪದಾರ್ಥಗಳನ್ನು ಅವುಗಳಿಗೆ ಸೇರಿಸಲಾಗುತ್ತದೆ.
ನಾವೇನು ಮಾಡಬೇಕು?
ಇಂತಹ ಜ್ಯೂಸ್ ಬದಲಿಗೆ ನಾವು ತಾಜಾ ಹಣ್ಣುಗಳನ್ನು ಸೇವಿಸುವುದು ಉತ್ತಮ. ಏಕೆಂದರೆ ಅವುಗಳಲ್ಲಿನ ನೈಸರ್ಗಿಕ ಫೈಬರ್ ಮತ್ತು ಜೀವಸತ್ವಗಳು ಆರೋಗ್ಯಕ್ಕೆ ಪ್ರಯೋಜನಕಾರಿ.
ಮಲ್ಟಿಗ್ರೇನ್ ಹಿಟ್ಟು
ಮಲ್ಟಿಗ್ರೇನ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಹೆಚ್ಚಿನ ಬ್ರಾಂಡ್‌ಗಳು ಬಾಳಿಕೆ ಬರಲೆಂದು ಇದಕ್ಕೆ ಆರೋಗ್ಯಕ್ಕೆ ಹಾನಿಕಾರಕವಾದ ಸಂರಕ್ಷಕಗಳನ್ನು ಸೇರಿಸುತ್ತವೆ.
ನಾವೇನು ಮಾಡಬೇಕು?
ಬದಲಾಗಿ, ಶುದ್ಧ ಗೋಧಿ ಅಥವಾ ಮನೆಯಲ್ಲೇ ಮಾಡಿದ ಧಾನ್ಯಗಳ ಹಿಟ್ಟನ್ನು ಬಳಸುವುದು ಉತ್ತಮ.
Also Read: ಮರದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಕೂದಲು ಉದರಲ್ಲ, ತಲೆನೋವು ಬರಲ್ಲ…ಮತ್ತೇನೆಲ್ಲಾ ಪ್ರಯೋಜನಗಳಿವೆ?
ಕಡಿಮೆ ಕೊಬ್ಬಿನ ತಿಂಡಿಗಳು
ಅನೇಕ ಜನರು ತೂಕವನ್ನು ನಿಯಂತ್ರಿಸಲು ಕಡಿಮೆ ಕೊಬ್ಬಿನ ತಿಂಡಿಗಳನ್ನು ಸೇವಿಸುತ್ತಾರೆ. ಆದರೆ ಇವುಗಳಲ್ಲಿ ಹೆಚ್ಚಿನ ತಿಂಡಿಗಳಲ್ಲಿ ರುಚಿಯನ್ನು ಕಾಪಾಡಿಕೊಳ್ಳಲು ಕೃತಕ ಸಕ್ಕರೆ ಮತ್ತು ಇತರ ರಾಸಯನಿಕಗಳನ್ನು ಸೇರಿಸಲಾಗುತ್ತದೆ. ಈ ತಿಂಡಿಗಳು ವಾಸ್ತವವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು.
ನಾವೇನು ಮಾಡಬೇಕು?
ನೀವು ಬೀಜಗಳು, ಡ್ರೈ ಫ್ರೂಟ್ಸ್, ನಟ್ಸ್ ಮತ್ತು ತಾಜಾ ಹಣ್ಣುಗಳನ್ನು ಸೇವಿಸಿದರೆ ಉತ್ತಮ. ಇದು ರುಚಿಕರವಾಗಿರುತ್ತದೆ. ಜೊತೆಗೆ ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ.
ಡಯಟ್ ಸೋಡಾ
ಡಯಟ್ ಸೋಡಾ ಸಾಮಾನ್ಯವಾಗಿ ಸಕ್ಕರೆ ಮತ್ತು ಸಂರಕ್ಷಕಗಳಿಂದ ಕೂಡಿರುತ್ತವೆ. ಈ ಉತ್ಪನ್ನಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ.
ನೀವೇನು ಮಾಡಬೇಕು?
ನಮ್ಮ ಆಹಾರವನ್ನು ಆಯ್ಕೆಮಾಡುವಲ್ಲಿ ಜಾಗರೂಕರಾಗಿರಬೇಕು. ನಾವು ಆರೋಗ್ಯಕರವೆಂದು ಪರಿಗಣಿಸುವ ಆಹಾರಗಳ ಅಂಶಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ತಾಜಾ ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ನಟ್ಸ್ ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ಆಹಾರದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ನಾವು ಆರೋಗ್ಯಕರ ಜೀವನವನ್ನು ನಡೆಸಬಹುದು. ಆಹಾರ ಉತ್ಪನ್ನಗಳ ಲೇಬಲ್‌ಗಳನ್ನು ಓದಿ. ಪ್ಯಾಕೇಜ್ ಮಾಡಿದ ಆಹಾರಗಳು ಪ್ರಮಾಣೀಕರಿಸದ ಹೊರತು ಅವುಗಳಿಂದ ದೂರವಿರಿ.