“ಯಶಸ್ಸಿಗೆ ಪದವಿಯೇ ಬೇಕಂತಿಲ್ಲ…ಧೈರ್ಯ ಮತ್ತು ಕಠಿಣ ಪರಿಶ್ರಮವಿದ್ದರೆ ಸಾಕು” ಎನ್ನುತ್ತಾರೆ ಬಲ್ಲವರು. ಬಹುತೇಕರ ಗೆಲುವನ್ನು ನೋಡಿದಾಗ ಯಾರಿಗಾದರೂ ಹಾಗನಿಸದೆ ಇರದು. ಇನ್ನು ರಾಯ್ಬರೇಲಿಯ ಮೊಹಮ್ಮದ್ ರಿಜ್ವಾನ್ ಕಥೆ ಕೇಳಿದರಂತೂ “ಹೌದು.. ನಮಗೇಕೆ ಇಂತಹ ಐಡಿಯಾಗಳು ಬರುವುದಿಲ್ಲ” ಅನಿಸಿದೆಯೂ ಇರದು. ಯೆಸ್, ಮೊಹಮ್ಮದ್ ರಿಜ್ವಾನ್ ಓದಿದ್ದು 8 ನೇ ತರಗತಿಯವರೆಗೆ ಮಾತ್ರ. ಆದರೆ ತನ್ನ ಬುದ್ಧಿವಂತಿಕೆಯಿಂದ ಇಂದು ಪ್ರತಿ ತಿಂಗಳು 6 ಲಕ್ಷ ರೂ.ಗಳವರೆಗೆ ಸಂಪಾದಿಸುತ್ತಿದ್ದು, ಅವರ ಯಶೋಗಾಥೆ ನಿಮಗಾಗಿ…
ಬಾಲ್ಯ ಕಳೆದದ್ದು ಆರ್ಥಿಕ ಸಂಕಷ್ಟದಲ್ಲಿಯೇ!
ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯ ಶಿವಗಢ ಪೊಲೀಸ್ ಠಾಣೆ ಪ್ರದೇಶದ ಗಾಧಿ ಗ್ರಾಮದಲ್ಲಿ ಜನಿಸಿದ ಮೊಹಮ್ಮದ್ ರಿಜ್ವಾನ್ ತಮ್ಮ ಬಾಲ್ಯವನ್ನು ಆರ್ಥಿ ಸಂಕಷ್ಟದಲ್ಲಿಯೇ ಕಳೆದರು. ಅವರ ತಂದೆ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದರು. ಮನೆಯ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇದೇ ಕಾರಣಕ್ಕೆ ರಿಜ್ವಾನ್ಗೆ 8 ನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು. ಮನೆಯ ಪರಿಸ್ಥಿತಿಯನ್ನು ನೋಡಿ ತನ್ನ ಓದನ್ನು ಬಿಟ್ಟು ಉದ್ಯೋಗವನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಇತರರ ಬಳಿ ಕೆಲಸ ಮಾಡುವ ಬದಲು ತಾನೇ ಏನಾದರೂ ಮಾಡಬೇಕೆಂದು ನಿರ್ಧರಿಸಿ, ಇದೇ ಆಲೋಚನೆಯೊಂದಿಗೆ ಅವರು ತಮ್ಮ ಸ್ನೇಹಿತರಲ್ಲಿ ಒಬ್ಬರಾದ ನವಸಾದ್ ಅವರನ್ನು ಸಂಪರ್ಕಿಸಿದರು. ಆತ ಅದಾಗಲೇ ಕೋಳಿ ಸಾಕಣೆಯಲ್ಲಿ ತೊಡಗಿದ್ದರು.
ರಿಜ್ವಾನ್ ತನ್ನ ಸ್ನೇಹಿತ ನವಸಾದ್ನಿಂದ ಕೋಳಿ ಸಾಕಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದರು. ಅವರ ಬಳಿ ಹೆಚ್ಚು ಹಣವಿರಲಿಲ್ಲ. ಆದ್ದರಿಂದ ಅವರು ಬ್ಯಾಂಕಿನಿಂದ ಸಾಲ ಪಡೆದು 2017 ರಲ್ಲಿ ಕೋಳಿ ಸಾಕಣೆ ಕೇಂದ್ರವನ್ನು ಪ್ರಾರಂಭಿಸಿದರು. ಆರಂಭದಲ್ಲಿ, ರಿಜ್ವಾನ್ 6,000 ಚದರ ಅಡಿ ಭೂಮಿಯಲ್ಲಿ ಕೋಳಿ ಸಾಕಣೆ ಕೇಂದ್ರವನ್ನು ನಿರ್ಮಿಸಿದರು. ಕ್ರಮೇಣ ಬ್ಯಾಂಕ್ ಸಾಲವನ್ನು ಮರುಪಾವತಿಸಿದರು. ಮೊದಲ ಬಾರಿಗೆ, ಫಾರ್ಮ್ ಸ್ಥಾಪಿಸಲು ಮತ್ತು ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳ ಹೂಡಿಕೆ ಮಾಡಬೇಕಾಯಿತು. ಕ್ರಮೇಣ ಅವರು ವ್ಯವಹಾರದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದನ್ನು ಕಲಿತರು. ಈಗ ವ್ಯಾಪಾರಿಗಳೇ ಅವರ ಫಾರ್ಮ್ಗೆ ಬಂದು ಕೋಳಿಗಳನ್ನು ಖರೀದಿಸುತ್ತಾರೆ, ಇದರಿಂದಾಗಿ ಅವರ ಸಾಗಣೆ ವೆಚ್ಚವೂ ಉಳಿತಾಯವಾಗುತ್ತದೆ.
ತಿಂಗಳಿಗೆ 6 ಲಕ್ಷ ರೂಪಾಯಿ ಗಳಿಸುವುದು ಹೇಗೆ?
ಯಶಸ್ವಿ ಕೋಳಿ ವ್ಯಾಪಾರಿಯಾಗಿರುವ ರಿಜ್ವಾನ್ ಅವರ ಫಾರ್ಮ್ ನಲ್ಲಿ ವಿವಿಧ ರೂಪದಲ್ಲಿ ಹಣ ಗಳಿಸುತ್ತಾರೆ. ಅಂದರೆ ಬಾಯ್ಲರ್ ಕೋಳಿಗಳನ್ನು ಮಾಂಸಕ್ಕಾಗಿ ಸಾಕುತ್ತಾರೆ. ಅವುಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಒಂದೇ ಬ್ಯಾಚ್ನಲ್ಲಿ ಸಾವಿರಾರು ಕೋಳಿಗಳನ್ನು ಉತ್ಪಾದಿಸಲಾಗುತ್ತದೆ. ಇದು ಉತ್ತಮ ಪ್ರಮಾಣದ ಆದಾಯವನ್ನು ತರುತ್ತದೆ. ಅವರು ಮಾಸಿಕ 5 ರಿಂದ 6 ಲಕ್ಷ ರೂ ಗಳಿಸುತ್ತಾರಂತೆ. ಹೆಚ್ಚು ಕಡಿಮೆ ಅವರ ವಾರ್ಷಿಕ ವಹಿವಾಟು ಸುಮಾರು 60-70 ಲಕ್ಷ ರೂ.ಇದೆ.