Miss Universe India 2024: ಸೆಪ್ಟೆಂಬರ್ 22 ರಂದು ರಾಜಸ್ಥಾನದ ಜೈಪುರದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2024 ರ ಅದ್ಭುತ ಸಮಾರಂಭ ನಡೆಯಿತು. 19 ವರ್ಷದ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024ರ ಕಿರೀಟವನ್ನು ತನ್ನದಾಗಿಸಿಕೊಂಡರು. ಈ ಕಿರೀಟವನ್ನು 2015 ರ ಮಿಸ್ ಯೂನಿವರ್ಸ್ ಇಂಡಿಯಾ ಮತ್ತು ಪ್ರಸಿದ್ಧ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ವೇದಿಕೆಯಲ್ಲಿ ರಿಯಾ ಸಿಂಘಾಗೆ ನೀಡಿದರು.
ಅಂದಹಾಗೆ ಭಾರತದ 51 ಸ್ಪರ್ಧಿಗಳು ಈ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದರು. ಆದರೆ ಅವರನ್ನೆಲ್ಲಾ ಸೋಲಿಸಿ ಗುಜರಾತ್ ನಿವಾಸಿ 19 ವರ್ಷದ ರಿಯಾ ಸಿಂಘಾ ಗೆದ್ದು ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇನ್ನು ರಿಯಾ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಜೇತೆಯಾಗಿ ಹೊರಹೊಮ್ಮಿದ ರಿಯಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಸ್ಪರ್ಧೆಯಲ್ಲಿ ಪ್ರಾಂಜಲ್ ಪ್ರಿಯಾ ಮೊದಲ ರನ್ನರ್ ಅಪ್ ಮತ್ತು ಛವಿ ಎರಡನೇ ರನ್ನರ್ ಅಪ್ ಆದರು. ಸುಶ್ಮಿತಾ ರಾಯ್ ಮತ್ತು ರುಫುಜಾನೊ ವಿಸೊ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡರು.
ಗೆದ್ದ ನಂತರ ತನ್ನ ಸಂತೋಷವನ್ನು ವ್ಯಕ್ತಪಡಿಸಿದ ರಿಯಾ, “ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ 2024ರ ಪ್ರಶಸ್ತಿಯನ್ನು ಗೆದ್ದಿದ್ದು, ತುಂಬಾ ಕೃತಜ್ಞನಾಗಿದ್ದೇನೆ. ಈ ಮಟ್ಟವನ್ನು ತಲುಪಲು ಸಾಕಷ್ಟು ಶ್ರಮಿಸಿದ್ದು, ಕಿರೀಟಕ್ಕೆ ಅರ್ಹಳೆಂದು ಭಾವಿಸುತ್ತೇನೆ. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ” ಎಂದು ತಿಳಿಸಿದರು.
ರಿಯಾ ಸಿಂಘಾ ಯಾರು?
ಮಿಸ್ ಯೂನಿವರ್ಸ್ ಇಂಡಿಯಾ 2024 ರ ಕಿರೀಟವನ್ನು ಗೆದ್ದ ರಿಯಾ ಸಿಂಘಾಗೆ 19 ವರ್ಷ ವಯಸ್ಸು. ಗುಜರಾತ್ ನಿವಾಸಿಯಾಗಿದ್ದಾರೆ. ಪ್ರಸಿದ್ಧ ರೂಪದರ್ಶಿ. ಇವರ ತಾಯಿ ರೀಟಾ ಸಿಂಘಾ. ತಂದೆ ಬ್ರಿಜೇಶ್ ಸಿಂಘಾ ಇಸ್ಟೋರ್ ಫ್ಯಾಕ್ಟರಿಯ ಉದ್ಯಮಿ ಮತ್ತು ನಿರ್ದೇಶಕರಾಗಿದ್ದಾರೆ. ರಿಯಾ ಕೇವಲ 16 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಮಿಸ್ ಟೀನ್ ಗುಜರಾತ್ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಈಗ ಅವರು ಮೆಕ್ಸಿಕೋದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ 2024 ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. Instagram ನಲ್ಲಿ 47 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.