ಗುಜರಾತಿನ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ರಮೇಶ್ ರೂಪರೇಲಿಯಾ ಅವರ ಜೀವನ ಖಂಡಿತ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಏಕೆಂದರೆ ರಮೇಶ್ ಅವರು ತಮ್ಮ ಬಾಲ್ಯದಿಂದಲೂ ಕಷ್ಟಗಳೊಂದಿಗೆ ಹೋರಾಡಿದರು. ಆದರೆ ಅವರ ಇಚ್ಛಾಶಕ್ತಿ ಅವರು ಊಹಿಸದ ಎತ್ತರಕ್ಕೆ ಕೊಂಡೊಯ್ದಿತು. ಹಸುಗಳನ್ನು ಮೇಯಿಸಲು ತಿಂಗಳಿಗೆ 80 ರೂಪಾಯಿ ಪಡೆಯುತ್ತಿದ್ದ ರಮೇಶ್ ಇಂದು ಹೈನುಗಾರಿಕೆಯಿಂದ ವಾರ್ಷಿಕ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.
ರಮೇಶ್ ಅವರು ಓದಿದ್ದು ಏಳನೇ ತರಗತಿಯವರೆಗೆ ಮಾತ್ರ. ಮೊದಮೊದಲಿಗೆ ಗೋಶಾಲೆ ಆರಂಭಿಸಿದ್ದರು. ಆದರೆ ಅವರ ಈ ನಿರ್ಧಾರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು. ಕುಟುಂಬವು ಸಾಲದ ಹೊರೆಗೆ ಸಿಲುಕಿತು. ನಂತರ ಸಾಲ ತೀರಿಸಲು ತನ್ನ ಜಮೀನು ಮಾರಿ ಗೊಂಡಾಲ್ ನಗರಕ್ಕೆ ಬಂದ ಇವರಿಗೆ ಹಸು ಮೇಯಿಸುವ ಕೆಲಸ ಸಿಕ್ಕಿತು. ಆಗ ತಿಂಗಳಿಗೆ 80 ರೂ. ಕೊಡುತ್ತಿದ್ದರು.
35 ಲಕ್ಷ ರೂ. ಲಾಭ ತಂದುಕೊಟ್ಟ ಈರುಳ್ಳಿ ಬೆಳೆ
ರಮೇಶ್ ಅವರ ಬಳಿ ಈಗ ಜಮೀನು ಕೂಡ ಇರದ ಕಾರಣ ಗೊಂಡಾಲ್‌ನಲ್ಲಿ ಜೈನ ಕುಟುಂಬದಿಂದ ಜಮೀನು ಬಾಡಿಗೆ ಪಡೆದರು. ಆ ಜಮೀನು ಬೇಸಾಯಕ್ಕೆ ಯೋಗ್ಯವಲ್ಲದ ಕಾರಣ ಹೊಲವನ್ನು ಫಲವತ್ತಾಗಿಸಲು ಯಾವತ್ತೂ ರಾಸಾಯನಿಕಗಳನ್ನು ಬಳಸಲಿಲ್ಲ. ಗೋವಿನ ಸಗಣಿ ಮತ್ತು ಗೋಮೂತ್ರವನ್ನು ಹೊಲಗಳಿಗೆ ಹಾಕಿದಾಗ ಫಲವತ್ತಾಯಿತು. ಇಲ್ಲಿಂದ ಅವರ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಅವರು ಇಲ್ಲಿ ಮೊದಲ ಬಾರಿಗೆ ಈರುಳ್ಳಿ ಬೆಳೆಯನ್ನು ಹಾಕಿದಾಗ ಅದರಲ್ಲಿ 35 ಲಕ್ಷ ರೂ. ಲಾಭ ಬಂದಿತು. ಇದು ಅವರ ಜೀವನದ ಮೊದಲ ಮಹತ್ವದ ತಿರುವು. ಈ ಯಶಸ್ಸು ಅವರಿಗೆ ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ತಂದುಕೊಟ್ಟಿತು.
Also Read: 6 ಬಾರಿ ಫೇಲ್ ಆದ ನಂತರವೂ ಧೃತಿಗೆಡಲಿಲ್ಲ…ಮಾಣಿಯೊಬ್ಬರು IAS ಅಧಿಕಾರಿಯಾದ ಯಶೋಗಾಥೆ
ತುಪ್ಪದ ವ್ಯಾಪಾರದಲ್ಲಿ ಯಶಸ್ಸು
ರಮೇಶ್ ಅವರು ಬಾಲ್ಯದಿಂದಲೂ ಹಸುಗಳನ್ನು ಪ್ರೀತಿಸುತ್ತಿದ್ದರು. ಹಾಗಾಗಿ ಅವರು ಇದೇ ಆಸಕ್ತಿಯನ್ನು ವ್ಯಾಪಾರವಾಗಿ ಮಾಡಲು ಬದಲಾಯಿಸಿಕೊಂಡರು. ಆದರೆ ಆರಂಭದಲ್ಲಿ ಈ ಕೆಲಸವು ಸುಲಭವಿರಲಿಲ್ಲ. ಹಾಲಿನ ವಾಸನೆಯ ಬಗ್ಗೆ ದೂರುಗಳು ಬರಲಾರಂಭಿಸಿದವು. ಆಗ ರಮೇಶ್ ಹಾಲು ಮಾರಾಟವನ್ನು ನಿಲ್ಲಿಸಬೇಕಾಯಿತು. ಆದರೆ ರಮೇಶ್ ಸೋಲನ್ನು ಒಪ್ಪಿಕೊಳ್ಳುವ ವ್ಯಕ್ತಿಯಲ್ಲ. ಚಿಕ್ಕ ಬಾಡಿಗೆ ರೂಮಿನಲ್ಲಿ ತುಪ್ಪ ತಯಾರಿಸಲು ಆರಂಭಿಸಿದರು. ಸೈಕಲ್ ನಲ್ಲಿ ಪ್ಲಾಸ್ಟಿಕ್, ಗಾಜಿನ ಲೋಟಗಳಲ್ಲಿ ತುಪ್ಪ ತುಂಬಿ ಬೀದಿ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಅವರ ಶ್ರಮ ಮುಂದೊಂದು ದಿನ ಇಷ್ಟು ದೊಡ್ಡ ಯಶಸ್ಸಿನ ರೂಪ ಪಡೆಯುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಗ್ರಾಹಕರು ತುಪ್ಪವನ್ನು ಇಷ್ಟಪಟ್ಟರು. ಅವರ ಉತ್ಪನ್ನವು ಜನಪ್ರಿಯವಾಯಿತು.
123 ದೇಶಗಳಿಗೆ ರಫ್ತು
ರಮೇಶ್ ಅವರು ಮಾರುತ್ತಿದ್ದ ತುಪ್ಪ ಸಾಮಾನ್ಯವಾದುದಲ್ಲ, ಔಷಧೀಯ ಗುಣಗಳಿಂದ ಕೂಡಿದ ಗೀರ್ ಹಸುವಿನ ತುಪ್ಪವನ್ನು ತಯಾರಿಸಿದರು. ಜನರು ತಕ್ಷಣ ಅದನ್ನು ಸೇವಿಸಲು ಪ್ರಾರಂಭಿಸಿದರು. ಗೀರ್ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪದ ಆರೋಗ್ಯಕರ ಗುಣಗಳು ಅದನ್ನು ಬಹಳ ಜನಪ್ರಿಯಗೊಳಿಸಿದವು. ಕ್ರಮೇಣ ರಮೇಶರ ವ್ಯಾಪಾರ ಬೆಳೆಯತೊಡಗಿತು ಮತ್ತು ಅವನ ಹೆಸರು ಎಲ್ಲೆಡೆ ಹರಡಿತು. ಕೆಲವೇ ಹಸುಗಳಿಂದ ಆರಂಭವಾದ ಈ ಪಯಣ ಇಂದು 250 ಗೀರ್ ಹಸುಗಳನ್ನು ಸಾಕುವವರೆಗೂ ತಲುಪಿದ್ದು, ರಮೇಶ್ ಅವರ ಈಗ ವಾರ್ಷಿಕ ಆದಾಯ 8 ಕೋಟಿ ರೂ. ಅವರ ತುಪ್ಪ ಈಗ 123 ದೇಶಗಳಿಗೆ ರಫ್ತಾಗುತ್ತದೆ.