ತ್ವಚೆ ಸುಂದರವಾಗಿ ಕಾಣಲೆಂದು ನಾವು ಏನೇನೆಲ್ಲಾ ಮಾಡುತ್ತೇವೆ ಅಲ್ಲವೇ? ಫೇಸ್ ವಾಶ್ ನಿಂದ ಹಿಡಿದು ಸೀರಮ್ ವರೆಗೆ ಹೀಗೆ ಎಲ್ಲವನ್ನೂ ಮುಖಕ್ಕೆ ಹಚ್ಚುತ್ತೇವೆ. ಆದರೆ ಮನೆಯಲ್ಲಿ ಕೇವಲ 5 ನಿಮಿಷಗಳ ಕಾಲ ಸ್ಟೀಮ್ ತೆಗೆದುಕೊಳ್ಳುವುದರಿಂದ ಮುಖಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ ಎಂಬುದು ಗೊತ್ತಾ?
ಈಗೆಲ್ಲಾ ತ್ವಚೆಯ ಆರೈಕೆ ಸಹ ನಮ್ಮ ದಿನಚರಿಯ ಭಾಗವಾಗಿದೆ. ಮೊನ್ನೆ ಮೊನ್ನೆಯಷ್ಟೇ ಪಾರ್ಲರ್‌ಗಳನ್ನೇ ನಂಬಿಕೊಂಡಿದ್ದ ನಮ್ಮ ಹೆಣ್ಣು ಮಕ್ಕಳು ಈಗೀಗ ಮನೆಯಲ್ಲಿಯೇ ತ್ವಚೆಯ ಕಾಳಜಿ ಮಾಡುವುದನ್ನು ಕಲಿತಿದ್ದಾರೆ. ಅದೂ ನೈಸರ್ಗಿಕ ಉತ್ಪನ್ನಗಳತ್ತ ಮತ್ತೆ ಮುಖ ಮಾಡುತ್ತಿರುವುದು ಸಂತಸದ ವಿಚಾರ. ಅಂದಹಾಗೆ ಒಂದು ಸುಲಭವಾದ ವಿಧಾನವಿದೆ. ಅದು ಸಹ ಸಾಕಷ್ಟು ಜನಪ್ರಿಯವಾಗಿದೆ. ನೀವು ಇದನ್ನು ಸಹ ಪ್ರಯತ್ನಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹೌದು ಫೇಸ್ ಸ್ಟೀಮಿಂಗ್ ಬಹಳ ಬಹಳ ಸುಲಭ ಹಾಗೂ ಪ್ರತಿಯೊಬ್ಬರೂ ಮಾಡಿಕೊಳ್ಳಬಹುದು. ಸ್ಟೀಮಿಂಗ್ ಎಂದರೆ ಹಬೆ ತೆಗೆದುಕೊಳ್ಳುವುದು. ಸಾಮಾನ್ಯವಾಗಿ ನಾವು ಶೀತವಾದಾಗ ಮಾತ್ರ ಈ ಟೆಕ್ನಿಕ್ ಅನುಸರಿಸುತ್ತೇವೆ. ಆದರೆ ವಾರಕ್ಕೊಮ್ಮೆಯಾದರೂ ತೆಗೆದುಕೊಳ್ಳುವುದರಿಂದ ತ್ವಚೆಗೆ ಹಲವು ಪ್ರಯೋಜನಗಳಿವೆ. ಚರ್ಮವನ್ನು ಮೃದುಗೊಳಿಸುತ್ತದೆ, ಎಣ್ಣೆ ಮತ್ತು ಕೊಳೆಯನ್ನು ಸಲೀಸಾಗಿ ತೆಗೆದುಹಾಕುತ್ತದೆ ಇತ್ಯಾದಿ..ಹಾಗಾದರೆ ಬನ್ನಿ ಫೇಸ್ ಸ್ಟೀಮಿಂಗ್‌ನಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ನೋಡೋಣ…
ಕೊಳೆ ತೆಗೆದುಹಾಕಲು..
ವಾರಕ್ಕೊಮ್ಮೆ ಐದು ನಿಮಿಷಗಳ ಕಾಲ ಸ್ಟೀಮ್ ತೆಗೆದುಕೊಳ್ಳುವುದು ಚರ್ಮದ ಆರೈಕೆಗೆ ಪರಿಣಾಮಕಾರಿ ಮಾರ್ಗವಾಗಿದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಮುಖದ ಆಯಾಸ ನಿವಾರಣೆಯಾಗುತ್ತದೆ. ನಿಮ್ಮ ಮುಖದ ರಂಧ್ರಗಳು ತೆರೆದುಕೊಳ್ಳುತ್ತವೆ. ಜೊತೆಗೆ ಇದು ಕೊಳೆ, ತೈಲವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ರಕ್ತದ ಹರಿವು ಹೆಚ್ಚಳ
ಅಷ್ಟೇ ಅಲ್ಲ, ಫೇಸ್ ಸ್ಟೀಮಿಂಗ್ ನಿಮ್ಮ ಮುಖಕ್ಕೆ ಉತ್ತಮ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಆಗ ನಿಮ್ಮ ತ್ವಚೆ ಆರೋಗ್ಯಕರವಾಗಿರುವುದಲ್ಲದೆ ಹೊಳೆಯುತ್ತದೆ. ಹಾಗೆಯೇ ಮುಖದೊಳಗೆ ಅಡಗಿರುವ ಕೊಳಕು ಹೊರಬರುತ್ತವೆ. ಇದರಿಂದಾಗಿ ನಿಮ್ಮ ಮುಖವು ಸ್ವಚ್ಛವಾಗುತ್ತದೆ.
ಬ್ಲ್ಯಾಕ್‌ಹೆಡ್ಸ್ ತೆಗೆಯಲು
ಬ್ಲ್ಯಾಕ್‌ಹೆಡ್ಸ್ ತೆಗೆಯಲು ಸ್ಟೀಮ್ ಸಹ ಸಹಾಯ ಮಾಡುತ್ತದೆ. ಮುಖಕ್ಕೆ ಸ್ಟೀಮ್ ತೆಗೆದುಕೊಂಡ ನಂತರ, ಅವು ಮೃದುವಾಗುತ್ತವೆ. ಆಗ ಸುಲಭವಾಗಿ ತೆಗೆಯಬಹುದು.
ಯಂಗ್ ಆಗಿ ಕಾಣಲು
ದೀರ್ಘಕಾಲದವರೆಗೆ ನೀವು ಯಂಗ್ ಆಗಿ ಕಾಣಲು ಸಹಾಯ ಮಾಡುತ್ತದೆ. ವಯಸ್ಸಾದಂತೆ, ನಿಮ್ಮ ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದರೆ ಸ್ಟೀಮ್ ತೆಗೆದುಕೊಳ್ಳುವುದರಿಂದ, ನೀವು ಡೆಡ್ ಸ್ಕಿನ್ ತೆಗೆದುಹಾಕಬಹುದು ಮತ್ತು ಅದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಡ್ರೈ ಸ್ಕಿನ್ ಇರುವವರು
ನಿಮ್ಮ ತ್ವಚೆ ಒಣಗಿದ್ದರೆ, ಸ್ಟೀಮ್ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ಬಗೆಹರಿಯುತ್ತದೆ. ಸ್ಟೀಮ್ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದು ನಿಮ್ಮ ಚರ್ಮವನ್ನು ಸಹ ಬಿಗಿಗೊಳಿಸುತ್ತದೆ. ಮೊಡವೆಗಳ ಸಮಸ್ಯೆಯೂ ಪರಿಹಾರವಾಗುತ್ತದೆ. ಮುಖದ ಮೇಲೆ ಕೊಳಕು ಸಂಗ್ರಹವಾಗುವುದರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಹಬೆ ತೆಗೆದುಕೊಳ್ಳುವುದರಿಂದ ಈ ಕೊಳೆ ಹೊರಬರುತ್ತದೆ ಮತ್ತು ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ.
Also Read: Hair Oiling Tips: ಕೂದಲಿಗೆ ಎಣ್ಣೆ ಹಚ್ಚುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ…ನಂತರ ನೋಡಿ ಮ್ಯಾಜಿಕ್
ಕಪ್ಪು ವರ್ತುಲಗಳ ಸಮಸ್ಯೆ ನಿವಾರಣೆ
ಹಬೆ ತೆಗೆದುಕೊಳ್ಳುವುದರಿಂದ ಕಪ್ಪು ವರ್ತುಲ( Black circles in the eye) ಸಮಸ್ಯೆ ಬಗೆಹರಿಯುತ್ತದೆ. ಇದು ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ. ಅಷ್ಟೇ ಏಕೆ ಸ್ಟೀಮ್ ಮುಖಕ್ಕೆ ತಕ್ಷಣದ ಹೊಳಪನ್ನು ನೀಡುತ್ತದೆ. ವಾರಕ್ಕೊಮ್ಮೆಯಾದರೂ ಮುಖಕ್ಕೆ ತೆಗೆದುಕೊಳ್ಳಿ. ಇದರಿಂದ ನಿಮಗೆ ಹಲವು ಪ್ರಯೋಜನಗಳು ಸಿಗುತ್ತವೆ.
ತಲೆನೋವಿಗೂ
ಮೂಗಿನ ದಟ್ಟಣೆಯಿಂದ ಉಂಟಾಗುವ ತಲೆನೋವನ್ನು ಸ್ಟೀಮ್ ಬಳಕೆಯಿಂದ ನಿವಾರಿಸಬಹುದು. ಬೇಕಾದಲ್ಲಿ ನೀವು ಸಾರಭೂತ ತೈಲಗಳನ್ನು ಸೇರಿಸುವ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು.
ಫೇಸ್ ಸ್ಟೀಮ್ ತೆಗೆದುಕೊಳ್ಳುವುದು ಹೇಗೆ?
*ಮೊದಲು ನಿಮ್ಮ ಮುಖವನ್ನು ಸೌಮ್ಯವಾದ ಕ್ಲೆನ್ಸರ್ ಅಥವಾ ಫೇಸ್ ವಾಶ್ ಅಥವಾ ಸೋಪಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ, ನಿಮ್ಮ ಮುಖ ಸ್ವಚ್ಛಗೊಂಡು ಸತ್ತ ಚರ್ಮದ ಕೋಶಗಳು, ಹೆಚ್ಚುವರಿ ಎಣ್ಣೆ ಮತ್ತು ಕಸವನ್ನು ತೆಗೆದುಹಾಕಬಹುದು.
* ಒಂದು ಪಾತ್ರೆ ತೆಗೆದುಕೊಂಡು ಸುಮಾರು ಐದು ಕಪ್ ನೀರು ಹಾಕಿ ಕುದಿಸಿ. ಈ ಪಾತ್ರೆಗೆ ಲ್ಯಾವೆಂಡರ್ ಅಥವಾ ಟೀ ಟ್ರೀ ಎಣ್ಣೆಯಂತಹ ಸಾರಭೂತ ತೈಲಗಳನ್ನು ಸಹ ಸೇರಿಸಬಹುದು.
*ನೀರನ್ನು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ನಿಮ್ಮ ಮುಖವನ್ನು ಪಾತ್ರೆಯಿಂದ ಸಾಕಷ್ಟು ದೂರದಲ್ಲಿ ಇರಿಸಿ ಹಬೆ ಅಥವಾ ಸ್ಟೀಮ್ ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ತಲೆಯನ್ನು ಟವಲ್ ನಿಂದ ಕವರ್ ಮಾಡಿ ಮತ್ತು ಹಬೆ ನಿಮ್ಮ ಮುಖಕ್ಕೆ ತಾಗುವಂತೆ ಬಿಡಿ.
*ಉತ್ತಮ ಫಲಿತಾಂಶಗಳಿಗಾಗಿ ಫೇಸ್ ಸ್ಟೀಮಿಂಗ್ ಅನ್ನು ಐದರಿಂದ ಹತ್ತು ನಿಮಿಷಗಳ ಕಾಲ ಮುಂದುವರಿಸಿ.
* ಕೊನೆಯಲ್ಲಿ ನಿಮ್ಮ ಮುಖವನ್ನು ಒರೆಸಿ ಟೋನರ್ ಬಳಸಿ.